Sunday, October 2, 2011

ಒಲವಿನ ಗೆಳೆಯನೆ ನಿನಗೆ..

ಒಲವಿನ ಗೆಳೆಯನೆ ನಿನಗೆ..

ಕೈ ಮುಗಿವೆ ..ನಾ ಬರೆವೆ..ನಿನಗಾಗಿ ನಾ ಕಾಯುವೆ.. 
ನಿನ್ನ ಮನಸು ಬಲ್ಲೆನು ನಾನು 
ನಿನ್ನಾಸೆ ಬಲ್ಲೆನು ನಾನು 
ಹೂವಂತ ಮನಸದು ನಿನದು 
ಜೇನಂತ ನುಡಿಗಳು ನಿನದು 

ಅಂದು ನಿನ್ನ ಕಂಡಾಗಿನಿಂದ ಏನೋ ಮನಸಲ್ಲಿ ಪುಳಕ. 
ನಿನ್ನ ಆ ಕಣ್ಣುಗಳು, ಆ ಕಣ್ಣಲ್ಲಿ ಏನೋ ಸೆಳೆತ. 
ಮತ್ತೆ ಮತ್ತೆ ಕದ್ದು ನೋಡಬೇಕೆನ್ನುವ ನಿನ್ನ ತುಟಿಗಳು. 
ಅಲ್ಲೇ ತಿಳಿ ಅಲೆಯಾಗಿ ತೇಲುವ ನಿನ್ನ ನಗು. 
ಒಹ್ ! ಸುಂದರ.

ಒಮ್ಮೆ ನೀ ನನ್ನ ಮಾತಾಡಿಸಬಾರದೇ ? ಎಂದು ಕಾತರಿಸುವ ಮನ.
ಸುಮ್ಮನಿರು ಮನವೇ. ಅವನೊಂದು ಮಿಂಚು ಎಂದರೂ
ಆ ಮಿಂಚನ್ನು ಹೊಳೆವ ಸಂಚನ್ನು ಮುಟ್ಟುವ ಆಸೆ.
ಕಣ್ಣೊಳಗೆ ಕಣ್ಣು ಬೆರೆಸುವಾಸೆ. 

ಹೇ ಹುಡುಗ ನನ್ನ ಪ್ರೀತಿಸುವೆಯೇನೋ? 
ಏನೋ ಗೊತ್ತಿಲ್ಲ ಕಣೋ ನಾನು ಹುಡುಗನೇ  ಆದರೂ ನಿನ್ನ ಮೇಲೆ ಏಕೋ ಮನಸು.
ಪ್ರೀತಿಯಿಂದ ಅಪ್ಪಿಕೊಳ್ಳುವ .
ಮುದ್ದಿನಿಂದ ಗಲ್ಲ ಸವರುವ 
ನಿನ್ನ ಹೃದಯವ ಕದ್ದು ಒಯ್ಯುವ 
ನಿನ್ನುಸಿರಲಿ ನನ್ನ ಹೆಸರು ಸೇರಿಸುವ 
ಎಂಬ ಸಣ್ಣ ಸಣ್ಣ ಬಯಕೆಗಳು ಕಣೋ ..

ಎಂದೋ ಒಮ್ಮೆ ನಿನ್ನ ಕಂಡ ಹಾಗೆ 
ಪೂರ್ವ ಜನ್ಮದಲ್ಲೋ  ಪುನರ್ಜನ್ಮದಲ್ಲೋ 
ಗೆಳೆಯನೋ, ಸ್ನೇಹಿತನೋ, ಆತ್ಮಿಯನೋ .. ಹೇಳೋ..
ಸುಳಿಯಬೇಡ ಕಣೋ ನೀ ಹೀಗೆ
ಒಮ್ಮೆ ಮಿಂಚಂಚೆಯಲ್ಲಿ, ಒಮ್ಮೆ ಕಿರು ಸಂದೇಶದಲ್ಲಿ


ಈಗಲೂ "ತೇರೆ ಮೇರೆ ಬೀಚ್ ಮೇ .. ಕೈಸಾ ಹೈ  ಯೆಹ್  ಬಂಧನ್..." ಅಂತ ಕೇಳಿದಾಗ 
ನಿನ್ನ ನೆನಪಾಗುವುದು. 
ಈ ಅನುರಾಗಕೆ ಏನು ಹೆಸರಿಡಲಿ ತಿಳಿಸೋ 

 ನೆನಪಿದೆಯೇನೋ ನಾನು ನಿನ್ನ ಮಾತಾಡಿಸಿದ್ದು.
ಬೇಕೆಂತಲೇ ನಿನ್ನ ಪಕ್ಕಕ್ಕೆ ಕುಳಿತೆ.
ನನ್ನ ಹೃದಯದ ನೂರು ಡಂಗುರ ಬಾರಿಸಿದ ಹಾಗೆ.
ಮೆಲ್ಲಗೆ ನಿನ್ನ ಹೆಸರು ಕರೆವಾಗ ಕಂಪಿಸಿದ ತುಟಿಗಳು 
ಬೆವರಿದ ಕಂಕಳು , ನಡುಗಿದ ಕೈಗಳು 
ನೀ ಯಾಕೋ ಹೀಗೆ ಕಾಡುವೆ.
ನಿನ್ನ ಕಂಡಾಗೆಲ್ಲ ನನ್ನಲಿ ನಾನಿಲ್ಲ .

ನಿನ್ನ ಪರಿಚಯಕ್ಕೆ ಕುಲುಕಿದ ನಿನ್ನ  ಕೈ ಸ್ಪರ್ಶ 
ಇನ್ನೂ ಹಾಗೆ ಹಸಿಯಾಗಿದೆ.
ಇನ್ನು ನಿನ್ನ ಪರಿಚಯ ಗಾಢ ಸ್ನೇಹವಾಗಿ ಅದು ಪ್ರೀತಿಯಾಗಿ ಅರಳುವಾಗ 
ನೀ ಬರೆದ ಮೊದಲ  ಸಂದೇಶ ಇಂದೂ ನನ್ನ ಹೃದಯದಲ್ಲಿ ನಲ್ಲಿ ಅಡಗಿದೆ ಕಣೋ 
ದಿನಕ್ಕೊಮ್ಮೆ ಓದುವೆ, ನಲಿಯುವೆ .
ಆ ದಿನಗಳು ಪ್ರತಿದಿನ ಭೇಟಿಯಾಗುವ ಹೊತ್ತು.
ನಿನ್ನಲ್ಲೂ ನನ್ನ ಹಾಗೆ ಭಾವನೆಗಳು ಇವೆ ಎಂದಾಗ 
ಆನಂದಕೆ ಈ ಬಾನು ಸಾಕಾಗದೆ ದಿಗಂತಕ್ಕೆ ಹಾರಿದ್ದೆ ಹುಡುಗಾ.

"ದೇವರಂಥ ಗೆಳೆಯ ಬೇಕು.." ಎಂದು  ಎಲ್ಲೋ ಉಲಿಯುವ  ಹಾಡು ಕೇಳಿದಾಗ 
ದೇವರೇ ನೀನು ಎಂಬ ಭಾವನೆ ಬರುತ್ತೋ.
ನಿನ್ನ ಹುಚ್ಚು ಸಂದೇಶಕ್ಕೆ ಕಾಯುವ, ಕದ್ದು ಓದುವ ಪಿಚ್ಚು ಮನಸು 
 ಮನಸಿಲ್ಲದಿದ್ದರೂ delete ಮಾಡುವಾಗಿನ ನೋವು 
ನಿನಗೂ ಆಗುತ್ತೇನೋ ?

"ಕಂಡಿಲ್ಲ ನಾನು ಆ ದೇವರನ್ನು 
ಇರಬಹುದೇ ಏನು ನಿನ್ನಂತೆ ಅವನು?" 
ಎಷ್ಟು ಅರ್ಥ ಪೂರ್ಣ ಅಲ್ವೇನೋ?
ಅಂದಿನಿಂದ ನಿನ್ನ ಹೆಸರಿನಿಂದ ದಿನ ಪ್ರಾರಂಭ , ಮತ್ತು ಅಂತ್ಯವೂ ಕೂಡ.
 ಆ ದೇವರನ್ನು ಇಷ್ಟೊಂದು ಜಪಿಸಿಲ್ಲ ಅನ್ಸುತ್ತೆ ಕಣೋ. 

ಅಂದಿನ ದಿನ ನಾವಿಬ್ಬರೂ ಮೈ ಮನಸನ್ನು ಹಂಚಿಕೊಂಡ ದಿನ.
ಎಷ್ಟು ಸೆಕ್ಸಿ ನೀನು, ತುಂಬಾ ಪೋಲಿ ಕಣೋ 
ಏನೇನೋ ಮಾಡಿಬಿಟ್ಟೆ.. ನನ್ನೆಲ್ಲಾ ಗುಟ್ಟು ನಿನ್ನಲ್ಲಿ ರಟ್ಟು.
ಆ ಮಧುರ ಸ್ಪರ್ಶ.. ಹರ್ಷ.. ಸುಖಾನುಭವ 

ಮನಸೆಲ್ಲ ನೀನೆ
ಅಬ್ಬ ಆ ನಿನ್ನ ಹಿಡಿತ, ನಿನ್ನ ಸ್ಪರ್ಶದಲ್ಲಿ ಎಂಥ ಶಕ್ತಿ 
ಬೆಳಗಾದರು  ನನಗೆ ನಿನ್ನದೇ ಗುಂಗು
ಆ ರಾತ್ರಿಯದೆ ನೆನಸಿ 
ಮೈಯ್ಯೆಲ್ಲ ಕಚಗುಳಿಯಿಟ್ಟಂತೆ . 
"ರಾತ್ ಕಾ ನಶಾ ಅಭಿ ಆಂಖ್ ಸೆ ಗಯಾ ನಹಿ..."
ನೆನಸಿ ನೆನಸಿ ... ಮತ್ತೊಮ್ಮೆ ಬೇಕೆನಿಸಿತ್ತು. 

ಕದ್ದು ಮುಚ್ಚಿ ನಿನ್ನ ಕೇಳಿದಾಗ ದೂರದ ತಂಗಾಳಿ ಬೀಸುವ 
ಬೆಟ್ಟಕ್ಕೆ ಕರೆದೊಯ್ದು 
ಬೆಚ್ಚಗಿನ ಅಪ್ಪುಗೆಯಲ್ಲಿ 
ಮೆಚ್ಚಿನ ಮುತ್ತು ಕೊಟ್ಟೆ .
ಅದರ ಸವಿ ಈಗಲೂ ಸಿಹಿಯಾಗಿದೆ ಕಣೋ .

ಅಲ್ಲೇ ನನಗೊಂದು ಪ್ರೀತಿಯಿಂದ "ಪುಟ್ಟ" ಎಂದು ಕರೆದಲ್ಲಾ 
ಮನತುಂಬಿ ಕಣ್ಣೀರು ಬಂದಿತು 
ಕಳೆದುಹೋದ ಅಮ್ಮನು ಹೀಗೆ ನನ್ನ ಕರೆಯುತ್ತಿದ್ದರಲ್ಲ ಎಂದಾಗ..
ನಾನೇ ನಿನ್ನ ಅಮ್ಮ ಅಂದು 
ನನ್ನನ್ನು ನಿನ್ನ  ಮಡಿಲಲ್ಲಿ ಮಲಗಿಸಿಕೊಂಡೆಯಲ್ಲ 
ಅದರ ಮಧುರಾಮೃತ ನಿನ್ನಲ್ಲಿ ಹೇಳಿಕೊಳ್ಳಲು ಆಗದೆ 
ಮನದಲ್ಲೇ ಅವಿತಿತ್ತುಕೊಂಡಿರುವೆ ಗೆಳೆಯ.

ಅಂದು
ವಿದೇಶ ಪ್ರಯಾಣ ವೆಂದು ಹಾರಿದ್ದೆ 
ಎಷ್ಟು ಹೆದರಿದ್ದೆ ಗೊತ್ತ ?
ಮತ್ತೆ ಬರ್ತಿಯೋ ಇಲ್ಲವೋ ಎಂದು ಕೇಳಿದ್ದೆ..
ನನ್ನ ಎದೆಗಾನಿಸಿ ನನಗಾಗಿ ಕಾಯುತ್ತಿರು ಎಂದು 
ಹೇಳಿ ಹೋದೆ 
ಮತ್ತೆ ನೀನು ಬಂದದ್ದು 
ನಿನ್ನ ಮದುವೆಯ ಆಮಂತ್ರಣ ಪತ್ರಿಕೆ ಹಿಡಿದು.

ನನಗಾದ ನೋವು, ಕಳೆದು ಹೋದ ನಿದ್ರೆ 
ನಾವಿಕನಿಲ್ಲದ ದೋಣಿಯನ್ನು  
 ಎಲ್ಲವೂ ಒಮ್ಮೆಲೇ ದೂರದ ತೀರಕೆ 
ಒಯ್ದ ಚಂಡಮಾರುತದಂತೆ ಬಂದು ಹೋದೆ

ಕಾರಣ ಕೇಳಲು ನನಗೆ ಭಯ ಆಯ್ತು ಕಣೋ 
ಹೂಂ ... ನಿನ್ನದೂ ಅಂತ ಒಂದು ಜೀವನ ಇದೆಯಲ್ಲ .
ನನ್ನ ನಿನ್ನ ಸಂಬಂಧ (ಕಳ್ಳ ಸಂಬಂಧ ) ತಾತ್ಕಾಲಿಕ
ಅಂತ ಮನಸ್ಸು ಗಟ್ಟಿ ಮಾಡಿಬಿಟ್ಟೆಯಾ 
ನಿನ್ನನ್ನು ನಾನು ಕಡೆ ಗಳಿಗೆ ವರೆಗೂ ನೋಡಿಕೊಳ್ಳುವ ಭರವಸೆ 
ಈಗಲೂ ಇದೆ ಕಣೋ 
ಆದರೆ ಸಮಾಜ ಒಪ್ಪಬೇಕಲ್ಲ ಅಂತ 

ಇಷ್ಟೇ ಏನೋ ನಿನ್ನ ಸ್ನೇಹ ಪ್ರೀತಿ 
"ಆಗಾಗ ಬಂದು ನಿನ್ನ ನೋಡಿಕೊಂಡು ಹೋಗ್ತೀನಿ" ಅಂದೆ 
ನಾನೇನು ಗಂಡು ವೇಶ್ಯೆ ಏನೊ?
ನಾನು ನಿನ್ನಲ್ಲಿ ನಿಜ ಪ್ರೀತಿ ಸ್ನೇಹ ಬಯಸಿದ್ದೆ ಹಾಗೆ ಇದೆ ಕೂಡ ಈಗಲೂ 

ಸರಿ ಬಿಡು ಗೆಳೆಯ...
ನೀನು ಸರಿಯಾದ ಆಯ್ಕೆ ಮಾಡಿದ್ದಿಯ 
ಮೊದಲ ಆದ್ಯತೆ ಸರಿಯಾಗೇ ಇದೆ 

ನನ್ನ ನಿನ್ನ ಕೊನೆಯ ಭೇಟಿ 
ಅಂತ ನಿನ್ನ ಮದುವೆಗೆ ಬಂದಿದ್ದೆ ಕಣೋ 
ನೀನು ತುಂಬಾ ಬ್ಯುಸಿ ಇದ್ದೆ
ನಿನಗೆ ಉಡುಗೊರೆ ಸಹ ಕೊಟ್ಟಿದ್ದೇನೆ. 
ಜೋಪಾನವಾಗಿ ನೋಡಿಕೋ  ಅದನ್ನ 
 ಹಳೆಯದು ಅಂತ ಎಸೆಯಬೇಡ ಗೆಳೆಯ 
ನನ್ನ ಪ್ರಾಣವೇ ಅದು..

ಎಷ್ಟು ಅತ್ತಿದ್ದೆ ಗೊತ್ತ ಅಂದು 
ಅಳಬಾರದು ಇಷ್ಟೇ ಜೀವನ ಅಂತ ಇದ್ದರೂ 
ಅಳು ಬಂದಿತು ಕಣೋ 

ಮರೆಯದ ನೆನಪನು 
ಎದೆಯಲ್ಲಿ ನೀನು ಗಿಡವಾಗಿ ನೆಟ್ಟೆ...
ಈಗ ಅದು ಕಣ್ಣೀರ ಹನಿಯಲ್ಲಿ ನಿನ್ನ 
ನೆನಪಿನ ಹೂಗಳನ್ನ ಬಿಟ್ಟಿದೆ 
ಗೆಳೆಯಾ 

 ಏನಂತ ಹೆಸರಿಡಲಿ ಆ ಹೂವಿಗೆ ..?







 
 



No comments:

Post a Comment

ಕುರುಡು ಪ್ರೀತಿಯಿಂದ..

ಕುರುಡು ಪ್ರೀತಿಯಿಂದ..   ಹೇಗೆ ಬರೆಯಲಿ ಈ ವಿಷಯವನ್ನು ಅಂತ ಅನಿಸುತ್ತಲೇ ಯಾಕೋ ನನ್ನ ಮೇಲೆ ನನಗೆ ಬೇಸರವಾಗುತ್ತಿದೆ. ಅದು ನಾನು ಮಾಡಿದ ತಪ್ಪೋ, ಅವನು ಮಾಡಿದ ತಪ್ಪೋ ಅಥವಾ...