Sunday, October 2, 2011

ಒಲವಿನ ಗೆಳೆಯನೆ ನಿನಗೆ..

ಒಲವಿನ ಗೆಳೆಯನೆ ನಿನಗೆ..

ಕೈ ಮುಗಿವೆ ..ನಾ ಬರೆವೆ..ನಿನಗಾಗಿ ನಾ ಕಾಯುವೆ.. 
ನಿನ್ನ ಮನಸು ಬಲ್ಲೆನು ನಾನು 
ನಿನ್ನಾಸೆ ಬಲ್ಲೆನು ನಾನು 
ಹೂವಂತ ಮನಸದು ನಿನದು 
ಜೇನಂತ ನುಡಿಗಳು ನಿನದು 

ಅಂದು ನಿನ್ನ ಕಂಡಾಗಿನಿಂದ ಏನೋ ಮನಸಲ್ಲಿ ಪುಳಕ. 
ನಿನ್ನ ಆ ಕಣ್ಣುಗಳು, ಆ ಕಣ್ಣಲ್ಲಿ ಏನೋ ಸೆಳೆತ. 
ಮತ್ತೆ ಮತ್ತೆ ಕದ್ದು ನೋಡಬೇಕೆನ್ನುವ ನಿನ್ನ ತುಟಿಗಳು. 
ಅಲ್ಲೇ ತಿಳಿ ಅಲೆಯಾಗಿ ತೇಲುವ ನಿನ್ನ ನಗು. 
ಒಹ್ ! ಸುಂದರ.

ಒಮ್ಮೆ ನೀ ನನ್ನ ಮಾತಾಡಿಸಬಾರದೇ ? ಎಂದು ಕಾತರಿಸುವ ಮನ.
ಸುಮ್ಮನಿರು ಮನವೇ. ಅವನೊಂದು ಮಿಂಚು ಎಂದರೂ
ಆ ಮಿಂಚನ್ನು ಹೊಳೆವ ಸಂಚನ್ನು ಮುಟ್ಟುವ ಆಸೆ.
ಕಣ್ಣೊಳಗೆ ಕಣ್ಣು ಬೆರೆಸುವಾಸೆ. 

ಹೇ ಹುಡುಗ ನನ್ನ ಪ್ರೀತಿಸುವೆಯೇನೋ? 
ಏನೋ ಗೊತ್ತಿಲ್ಲ ಕಣೋ ನಾನು ಹುಡುಗನೇ  ಆದರೂ ನಿನ್ನ ಮೇಲೆ ಏಕೋ ಮನಸು.
ಪ್ರೀತಿಯಿಂದ ಅಪ್ಪಿಕೊಳ್ಳುವ .
ಮುದ್ದಿನಿಂದ ಗಲ್ಲ ಸವರುವ 
ನಿನ್ನ ಹೃದಯವ ಕದ್ದು ಒಯ್ಯುವ 
ನಿನ್ನುಸಿರಲಿ ನನ್ನ ಹೆಸರು ಸೇರಿಸುವ 
ಎಂಬ ಸಣ್ಣ ಸಣ್ಣ ಬಯಕೆಗಳು ಕಣೋ ..

ಎಂದೋ ಒಮ್ಮೆ ನಿನ್ನ ಕಂಡ ಹಾಗೆ 
ಪೂರ್ವ ಜನ್ಮದಲ್ಲೋ  ಪುನರ್ಜನ್ಮದಲ್ಲೋ 
ಗೆಳೆಯನೋ, ಸ್ನೇಹಿತನೋ, ಆತ್ಮಿಯನೋ .. ಹೇಳೋ..
ಸುಳಿಯಬೇಡ ಕಣೋ ನೀ ಹೀಗೆ
ಒಮ್ಮೆ ಮಿಂಚಂಚೆಯಲ್ಲಿ, ಒಮ್ಮೆ ಕಿರು ಸಂದೇಶದಲ್ಲಿ


ಈಗಲೂ "ತೇರೆ ಮೇರೆ ಬೀಚ್ ಮೇ .. ಕೈಸಾ ಹೈ  ಯೆಹ್  ಬಂಧನ್..." ಅಂತ ಕೇಳಿದಾಗ 
ನಿನ್ನ ನೆನಪಾಗುವುದು. 
ಈ ಅನುರಾಗಕೆ ಏನು ಹೆಸರಿಡಲಿ ತಿಳಿಸೋ 

 ನೆನಪಿದೆಯೇನೋ ನಾನು ನಿನ್ನ ಮಾತಾಡಿಸಿದ್ದು.
ಬೇಕೆಂತಲೇ ನಿನ್ನ ಪಕ್ಕಕ್ಕೆ ಕುಳಿತೆ.
ನನ್ನ ಹೃದಯದ ನೂರು ಡಂಗುರ ಬಾರಿಸಿದ ಹಾಗೆ.
ಮೆಲ್ಲಗೆ ನಿನ್ನ ಹೆಸರು ಕರೆವಾಗ ಕಂಪಿಸಿದ ತುಟಿಗಳು 
ಬೆವರಿದ ಕಂಕಳು , ನಡುಗಿದ ಕೈಗಳು 
ನೀ ಯಾಕೋ ಹೀಗೆ ಕಾಡುವೆ.
ನಿನ್ನ ಕಂಡಾಗೆಲ್ಲ ನನ್ನಲಿ ನಾನಿಲ್ಲ .

ನಿನ್ನ ಪರಿಚಯಕ್ಕೆ ಕುಲುಕಿದ ನಿನ್ನ  ಕೈ ಸ್ಪರ್ಶ 
ಇನ್ನೂ ಹಾಗೆ ಹಸಿಯಾಗಿದೆ.
ಇನ್ನು ನಿನ್ನ ಪರಿಚಯ ಗಾಢ ಸ್ನೇಹವಾಗಿ ಅದು ಪ್ರೀತಿಯಾಗಿ ಅರಳುವಾಗ 
ನೀ ಬರೆದ ಮೊದಲ  ಸಂದೇಶ ಇಂದೂ ನನ್ನ ಹೃದಯದಲ್ಲಿ ನಲ್ಲಿ ಅಡಗಿದೆ ಕಣೋ 
ದಿನಕ್ಕೊಮ್ಮೆ ಓದುವೆ, ನಲಿಯುವೆ .
ಆ ದಿನಗಳು ಪ್ರತಿದಿನ ಭೇಟಿಯಾಗುವ ಹೊತ್ತು.
ನಿನ್ನಲ್ಲೂ ನನ್ನ ಹಾಗೆ ಭಾವನೆಗಳು ಇವೆ ಎಂದಾಗ 
ಆನಂದಕೆ ಈ ಬಾನು ಸಾಕಾಗದೆ ದಿಗಂತಕ್ಕೆ ಹಾರಿದ್ದೆ ಹುಡುಗಾ.

"ದೇವರಂಥ ಗೆಳೆಯ ಬೇಕು.." ಎಂದು  ಎಲ್ಲೋ ಉಲಿಯುವ  ಹಾಡು ಕೇಳಿದಾಗ 
ದೇವರೇ ನೀನು ಎಂಬ ಭಾವನೆ ಬರುತ್ತೋ.
ನಿನ್ನ ಹುಚ್ಚು ಸಂದೇಶಕ್ಕೆ ಕಾಯುವ, ಕದ್ದು ಓದುವ ಪಿಚ್ಚು ಮನಸು 
 ಮನಸಿಲ್ಲದಿದ್ದರೂ delete ಮಾಡುವಾಗಿನ ನೋವು 
ನಿನಗೂ ಆಗುತ್ತೇನೋ ?

"ಕಂಡಿಲ್ಲ ನಾನು ಆ ದೇವರನ್ನು 
ಇರಬಹುದೇ ಏನು ನಿನ್ನಂತೆ ಅವನು?" 
ಎಷ್ಟು ಅರ್ಥ ಪೂರ್ಣ ಅಲ್ವೇನೋ?
ಅಂದಿನಿಂದ ನಿನ್ನ ಹೆಸರಿನಿಂದ ದಿನ ಪ್ರಾರಂಭ , ಮತ್ತು ಅಂತ್ಯವೂ ಕೂಡ.
 ಆ ದೇವರನ್ನು ಇಷ್ಟೊಂದು ಜಪಿಸಿಲ್ಲ ಅನ್ಸುತ್ತೆ ಕಣೋ. 

ಅಂದಿನ ದಿನ ನಾವಿಬ್ಬರೂ ಮೈ ಮನಸನ್ನು ಹಂಚಿಕೊಂಡ ದಿನ.
ಎಷ್ಟು ಸೆಕ್ಸಿ ನೀನು, ತುಂಬಾ ಪೋಲಿ ಕಣೋ 
ಏನೇನೋ ಮಾಡಿಬಿಟ್ಟೆ.. ನನ್ನೆಲ್ಲಾ ಗುಟ್ಟು ನಿನ್ನಲ್ಲಿ ರಟ್ಟು.
ಆ ಮಧುರ ಸ್ಪರ್ಶ.. ಹರ್ಷ.. ಸುಖಾನುಭವ 

ಮನಸೆಲ್ಲ ನೀನೆ
ಅಬ್ಬ ಆ ನಿನ್ನ ಹಿಡಿತ, ನಿನ್ನ ಸ್ಪರ್ಶದಲ್ಲಿ ಎಂಥ ಶಕ್ತಿ 
ಬೆಳಗಾದರು  ನನಗೆ ನಿನ್ನದೇ ಗುಂಗು
ಆ ರಾತ್ರಿಯದೆ ನೆನಸಿ 
ಮೈಯ್ಯೆಲ್ಲ ಕಚಗುಳಿಯಿಟ್ಟಂತೆ . 
"ರಾತ್ ಕಾ ನಶಾ ಅಭಿ ಆಂಖ್ ಸೆ ಗಯಾ ನಹಿ..."
ನೆನಸಿ ನೆನಸಿ ... ಮತ್ತೊಮ್ಮೆ ಬೇಕೆನಿಸಿತ್ತು. 

ಕದ್ದು ಮುಚ್ಚಿ ನಿನ್ನ ಕೇಳಿದಾಗ ದೂರದ ತಂಗಾಳಿ ಬೀಸುವ 
ಬೆಟ್ಟಕ್ಕೆ ಕರೆದೊಯ್ದು 
ಬೆಚ್ಚಗಿನ ಅಪ್ಪುಗೆಯಲ್ಲಿ 
ಮೆಚ್ಚಿನ ಮುತ್ತು ಕೊಟ್ಟೆ .
ಅದರ ಸವಿ ಈಗಲೂ ಸಿಹಿಯಾಗಿದೆ ಕಣೋ .

ಅಲ್ಲೇ ನನಗೊಂದು ಪ್ರೀತಿಯಿಂದ "ಪುಟ್ಟ" ಎಂದು ಕರೆದಲ್ಲಾ 
ಮನತುಂಬಿ ಕಣ್ಣೀರು ಬಂದಿತು 
ಕಳೆದುಹೋದ ಅಮ್ಮನು ಹೀಗೆ ನನ್ನ ಕರೆಯುತ್ತಿದ್ದರಲ್ಲ ಎಂದಾಗ..
ನಾನೇ ನಿನ್ನ ಅಮ್ಮ ಅಂದು 
ನನ್ನನ್ನು ನಿನ್ನ  ಮಡಿಲಲ್ಲಿ ಮಲಗಿಸಿಕೊಂಡೆಯಲ್ಲ 
ಅದರ ಮಧುರಾಮೃತ ನಿನ್ನಲ್ಲಿ ಹೇಳಿಕೊಳ್ಳಲು ಆಗದೆ 
ಮನದಲ್ಲೇ ಅವಿತಿತ್ತುಕೊಂಡಿರುವೆ ಗೆಳೆಯ.

ಅಂದು
ವಿದೇಶ ಪ್ರಯಾಣ ವೆಂದು ಹಾರಿದ್ದೆ 
ಎಷ್ಟು ಹೆದರಿದ್ದೆ ಗೊತ್ತ ?
ಮತ್ತೆ ಬರ್ತಿಯೋ ಇಲ್ಲವೋ ಎಂದು ಕೇಳಿದ್ದೆ..
ನನ್ನ ಎದೆಗಾನಿಸಿ ನನಗಾಗಿ ಕಾಯುತ್ತಿರು ಎಂದು 
ಹೇಳಿ ಹೋದೆ 
ಮತ್ತೆ ನೀನು ಬಂದದ್ದು 
ನಿನ್ನ ಮದುವೆಯ ಆಮಂತ್ರಣ ಪತ್ರಿಕೆ ಹಿಡಿದು.

ನನಗಾದ ನೋವು, ಕಳೆದು ಹೋದ ನಿದ್ರೆ 
ನಾವಿಕನಿಲ್ಲದ ದೋಣಿಯನ್ನು  
 ಎಲ್ಲವೂ ಒಮ್ಮೆಲೇ ದೂರದ ತೀರಕೆ 
ಒಯ್ದ ಚಂಡಮಾರುತದಂತೆ ಬಂದು ಹೋದೆ

ಕಾರಣ ಕೇಳಲು ನನಗೆ ಭಯ ಆಯ್ತು ಕಣೋ 
ಹೂಂ ... ನಿನ್ನದೂ ಅಂತ ಒಂದು ಜೀವನ ಇದೆಯಲ್ಲ .
ನನ್ನ ನಿನ್ನ ಸಂಬಂಧ (ಕಳ್ಳ ಸಂಬಂಧ ) ತಾತ್ಕಾಲಿಕ
ಅಂತ ಮನಸ್ಸು ಗಟ್ಟಿ ಮಾಡಿಬಿಟ್ಟೆಯಾ 
ನಿನ್ನನ್ನು ನಾನು ಕಡೆ ಗಳಿಗೆ ವರೆಗೂ ನೋಡಿಕೊಳ್ಳುವ ಭರವಸೆ 
ಈಗಲೂ ಇದೆ ಕಣೋ 
ಆದರೆ ಸಮಾಜ ಒಪ್ಪಬೇಕಲ್ಲ ಅಂತ 

ಇಷ್ಟೇ ಏನೋ ನಿನ್ನ ಸ್ನೇಹ ಪ್ರೀತಿ 
"ಆಗಾಗ ಬಂದು ನಿನ್ನ ನೋಡಿಕೊಂಡು ಹೋಗ್ತೀನಿ" ಅಂದೆ 
ನಾನೇನು ಗಂಡು ವೇಶ್ಯೆ ಏನೊ?
ನಾನು ನಿನ್ನಲ್ಲಿ ನಿಜ ಪ್ರೀತಿ ಸ್ನೇಹ ಬಯಸಿದ್ದೆ ಹಾಗೆ ಇದೆ ಕೂಡ ಈಗಲೂ 

ಸರಿ ಬಿಡು ಗೆಳೆಯ...
ನೀನು ಸರಿಯಾದ ಆಯ್ಕೆ ಮಾಡಿದ್ದಿಯ 
ಮೊದಲ ಆದ್ಯತೆ ಸರಿಯಾಗೇ ಇದೆ 

ನನ್ನ ನಿನ್ನ ಕೊನೆಯ ಭೇಟಿ 
ಅಂತ ನಿನ್ನ ಮದುವೆಗೆ ಬಂದಿದ್ದೆ ಕಣೋ 
ನೀನು ತುಂಬಾ ಬ್ಯುಸಿ ಇದ್ದೆ
ನಿನಗೆ ಉಡುಗೊರೆ ಸಹ ಕೊಟ್ಟಿದ್ದೇನೆ. 
ಜೋಪಾನವಾಗಿ ನೋಡಿಕೋ  ಅದನ್ನ 
 ಹಳೆಯದು ಅಂತ ಎಸೆಯಬೇಡ ಗೆಳೆಯ 
ನನ್ನ ಪ್ರಾಣವೇ ಅದು..

ಎಷ್ಟು ಅತ್ತಿದ್ದೆ ಗೊತ್ತ ಅಂದು 
ಅಳಬಾರದು ಇಷ್ಟೇ ಜೀವನ ಅಂತ ಇದ್ದರೂ 
ಅಳು ಬಂದಿತು ಕಣೋ 

ಮರೆಯದ ನೆನಪನು 
ಎದೆಯಲ್ಲಿ ನೀನು ಗಿಡವಾಗಿ ನೆಟ್ಟೆ...
ಈಗ ಅದು ಕಣ್ಣೀರ ಹನಿಯಲ್ಲಿ ನಿನ್ನ 
ನೆನಪಿನ ಹೂಗಳನ್ನ ಬಿಟ್ಟಿದೆ 
ಗೆಳೆಯಾ 

 ಏನಂತ ಹೆಸರಿಡಲಿ ಆ ಹೂವಿಗೆ ..?







 
 



Saturday, October 1, 2011

ಕುರೂಪದಲ್ಲೂ ಪ್ರೇಮ



Is being GOOD LOOKING important? Some people think that, if you have GOOD LOOK, you are fit everywhere!
Some Guys like only GOOD LOOKING guys in this "G" world. So, there is VALUE for good Heart or Emotions?
Those who are UGLY or not Handsome or DARK Complex, they are unfit for any relationship, including FRIENDSHIP?
Come on Guys..."We also have HEART, our blood also RED' Do not hurt our emotions!"
ಎಷ್ಟು ಭಾವನೆಗಳು ಕೆಲವೇ ಪದಗಳಲ್ಲಿ. ಹೌದು ಇಲ್ಲಿ ಅಂತರಂಗ ಸೌಂದರ್ಯಕ್ಕಿಂತ ಬಾಹ್ಯ ಸೌಂದರ್ಯಕ್ಕೆಹೆಚ್ಚು ಆದ್ಯತೆ. ಕುರೂಪದಲ್ಲೂ ಪ್ರೇಮ ಕಂಡವರು ಅತ್ಯಲ್ಪ. ಇದ್ದರು ಸ್ವಲ್ಪ ಸಮಯವೇ ಅನ್ನಬೇಕು. ಸೌಂದರ್ಯ ಅನ್ನೋದು ಶಾಶ್ವತ ಅಲ್ಲ.. ಆದರು ಅದರ ಹಿಂದೆ ಮರುಳಾಗಿ ಕೇವಲ ಕ್ಷಣಿಕ ಸುಖಕ್ಕಾಗಿ ಆಸೆ ಪಡುವ ಜನವೇ ತುಂಬಾ. ಅದೆಲ್ಲ ಹೇಗೆ ಇರಲಿ. ಇಲ್ಲಿ ಮುಖ ಸೌಂದರ್ಯಕ್ಕಿಂತ ಮನೋ ಸೌಂದರ್ಯ ಇದ್ದರಲ್ಲವೇ ಒಂದು ಸುಖ ಸಂಬಂಧ ಸಾಧಿಸಲು ಸಾಧ್ಯ. ದಯವಿಟ್ಟು ಅವರ ಭಾವನೆಗಳನ್ನ ಅರ್ಥ ಮಾಡಿಕೊಳ್ಳಬೇಕು. ಕುರೂಪಿಗಳನ್ನ ತುಚ್ಚವಾಗಿ ಕಾಣದೆ ಅವರ ಭಾವನೆಗಳಿಗೂ ಬೆಲೆ ಕೊಡ್ಬೇಕು. ನೇರಳೆ ಕಪ್ಪಾದರು ಹಣ್ಣು ಬಹಳ ರುಚಿ. ಕಪ್ಪು ಕೂದಲೇ ಏಕೆ ಬೇಕು? ಸೆಕ್ಸ್ ಗೆ ಕಪ್ಪು ರಾತ್ರಿಗಳೇ ಏಕೆ ಬೇಕು?

Sunday, July 31, 2011

ಮನಸಲ್ಲಿ ಚೂರು ಜಾಗ ಬೇಕಿದೆ



ಮಾನವ ಅಂದಮೇಲೆ ಒಂದು ಗಂಡು-ಹೆಣ್ಣು ಪರಸ್ಪರ ಆಕರ್ಷಣೆ, ಪ್ರೀತಿ, ಬಾಂಧವ್ಯ ಎಲ್ಲವೂ ಸಹಜ. ಪ್ರಕೃತಿಯ ನಿಯಮದಂತೆ ಆ ಇಬ್ಬರ ಮಿಲನದಿಂದ ಸಂತಾನ ಅಭಿವೃದ್ಧಿ ಮಾನವನ ವಂಶಾವಳಿ ಪೀಳಿಗೆಯ ಉದ್ದಾರ.
ಆದರೆ ಇಲ್ಲಿ ಪುರುಷ-ಪುರುಷ ಮಿಲನ ಸಹಜವೇ ಇಲ್ಲ ಅಸಹಜವೇ ಎನ್ನುವ ತೀವ್ರ ಗೊಂದಲ ಕಾಡುತ್ತಿವೆ.  ಸಹಜ ಕ್ರಿಯೆಯಂತೆ ಸಿಗದ ಈ ಪುರುಷ-ಪುರುಷ ಪ್ರೀತಿ (ಆಕರ್ಷಣೆ) ಸಿಕ್ಕಾಗ ಏನೋ ಸಂತೋಷ  ಮನಸ್ಸಿನ, ದೇಹದ ಮಿಲನ ಬಯಸಿ ಸುಖವನ್ನ ಅರಸಲು ತಡಕಾಡುತ್ತದೆ ಈ ಮನ. ಆದರೆ ಅದೇ ನಿಜವಾದ ಪ್ರೀತಿ ಸಿಗದೇ ಇದ್ದಾಗ ಅಲ್ಲಿರುವ ಆತಂಕ ದುಗುಡಕ್ಕೆ ಯಾವುದೇ ಗಂಡು-ಹೆಣ್ಣಿನ ವಿರಹ ಪ್ರೇಮಕ್ಕಿಂತ ಕಡಿಮೆ ಏನಿಲ್ಲ. ಇಲ್ಲೂ ಪ್ರೀತಿ ಪ್ರೇಮ ಸ್ನೇಹ ಆಕರ್ಷಣೆ ಎಲ್ಲವು ಇದೆ ಆದರೆ ಒಂದು ಜವಾಬ್ದಾರಿಯುತ ಸಂಬಂಧಗಳಿಲ್ಲ. "ಇಂದು ನೀ ನನ್ನವ ನಾಳೆ ನೀ ಯಾರೋ ..." ಎನ್ನುವ ಸ್ಥಿತಿಯಲ್ಲಿದ್ದೇವೆ. ಹೊಸತನ್ನು ಹುಡುಕುವ ಭರದಲ್ಲಿ ತಮ್ಮತನವನ್ನ ಕಳೆದುಕೊಳ್ಳುತ್ತಾ ಮುಂದಿನ ಜೀವನದ ಬಗ್ಗೆ ಚಿಂತಿಸದೆ, ಈಗಿನ ತಕ್ಷಣದ ಮಾನಸಿಕ, ದೈಹಿಕ ಆಸೆಗಳನ್ನ ಪೂರೈಸಿಕೊಳ್ಳುವುದರಲ್ಲಿ ನಿರತ..
ಆದರೆ ವಯಸ್ಸು ಆಕರ್ಷಣೆ ಎಲ್ಲವೂ ಕಡಿಮೆ ಆಗುತ್ತಾ ಬರುವಾಗ ಒಂಟಿತನ ಕಾಡದೆ ಇರುವುದಿಲ್ಲ. ಏನೇ ಇರಲಿ ಮಾನವ ಸಮಾಜ ಜೀವಿ ಜತೆಗಾರ ಬೇಕು ಉತ್ತಮ ಸಂಗಾತಿ , ಬಾಳ ಸಂಗಾತಿ ಬೇಕು.. ಸಿಗುವನೇ ಆ ಸಂಗಾತಿ ಎನ್ನುವ ಜೀವಿ? 
ಕಾಣದಾ ಕಡಲಿಗೆ ಹಂಬಲಿಸಿದೆ ಮನ.. 
ಕಾಣಬಲ್ಲೆನೆ ಒಂದು ದಿನ ?
ಸೇರಬಲ್ಲೆನೆ ಒಂದು ಕ್ಷಣ ?
ಕಾಣದ ಕಡಲು, ಮುಗಿಲ ಮಲ್ಲಿಗೆ, ನಿಲುಕದ ನಕ್ಷತ್ರ, ಮೃಗತೃಷ್ಣ, ಮರೀಚಿಕೆ , ಕಾಮನಬಿಲ್ಲು, ಆಕಾಶ ದೀಪ, ಬಿಸಿಲುಗುದುರೆ 
ಎಲ್ಲವು ನೀನಾಗಬೇಡ ಗೆಳೆಯ. ನನ್ನಂತೆ ನಿನಗೂ ಒಂದು ಮನಸಿದೆ..
"ಆ ಮನಸಲ್ಲಿ ಚೂರು ಜಾಗ ಬೇಕಿದೆ"
 

Wednesday, June 15, 2011

ಎಲ್ಲಿಂದಲೋ ಬಂದವರು....



ಹೌದು ಇವರು ಎಲ್ಲಿಂದಲೋ ಬಂದವರು..
ಬಂದವರೇ ಮನಸನ್ನ ಆಕ್ರಮಿಸಿ ಬಿಡ್ತಾರೆ. ಅವರ ಮಾತು ಮಾತಿನ ಮೋಡಿ.. ನಗು ನಗುವಿನ ಅಂದ ಚೆಂದ ಮನಸೂರೆ ಮಾಡುತ್ತೆ.
ಹೀಗೆ ಬಂದವ ಸನುಶ್. ಬಂದವನೇ ಮನ ಕದ್ದು ಮಂಚದಲ್ಲಿ ಆಟವಾಡಿ ಸಣ್ಣ ವಿಷಯಕ್ಕೆ ಕೋಪ ಮಾಡಿಕೊಂಡು ಹೋದ. ಆದರು ಅವನ ಮಾತಿಗೆ.. ಮನಸಿಗೆ ಸೋತಿದ್ದ ನಾನು ಕಾಂಟಾಕ್ಟ್ ನಲ್ಲಿದ್ದೆ. ಮತ್ತೊಮ್ಮೆ ಹೀಗೆ ಚಾಟ್ ನಲ್ಲಿ ಸಿಕ್ಕಿದಾಗ...
 'I am in deep trouble. Please help me, argued with my parents and came from native to here. since yesterday i didn't have food yaar. If you give me some amount i will give back sure' ಎಂದ ನನ್ನ ಮನಸು ಕರಗಿತು. ಊಟ ಮಾಡಿಲ್ಲ ಎಂದು ಸರಿ "ಸಂಜೆ ಸಿಗು" ಎಂದೆ.
ಆ ಸಂಜೆ ಸಿಕ್ಕಿದ. ಅವನ ಮೊಗದಲ್ಲಿ ಹಿಂದಿನ ಕಳೆ, ಆಕರ್ಷಣೆ ಎಲ್ಲವೂ ಕಳೆದು ಹೋಗಿತ್ತು. ಅವನ ಧೈರ್ಯ ಸ್ಥೈರ್ಯ ಎಲ್ಲವು ಉಡುಗಿತ್ತೇನೋ. ಅವನಿಗೆ ಏನೋ ಕೇಳುವ ಆತುರ ಮನದಲ್ಲಿ ಏನೋ ಸಂಕೋಚ ಇತ್ತು. ಆದರು ಧೈರ್ಯ ಮಾಡಿ ಕೇಳಿದ 
"ನಾಳೆ ಮೈಸೂರು ನಲ್ಲಿ interview ಇದೆ. ಹೋಗೋದಿಕ್ಕೆ ಊಟಕ್ಕೆ ದುಡ್ಡಿಲ್ಲ, ಇದ್ದರೆ ಕೊಡು ಅಲ್ಲಿ ಕೆಲಸ ಸಿಕ್ಕ ಮೇಲೆ ಕೊಡ್ತೀನಿ" ಅಂದ. ಆಯ್ತು ಅಂತ ಅವನಿಗೆ ಹಣ ಕೊಟ್ಟೆ. ತೆಗೆದುಕೊಂಡು ಇಲ್ಲಿವರೆಗೆ ಎರಡು ವರ್ಷ ಆಗುತ್ತಾ ಬಂದಿತು. ಒಂದು ಕೃತಜ್ಞತೆಗಾಗಿ ಒಂದು ಸಂದೇಶ  ಇಲ್ಲ. ನನಗೆ ಆ ಹಣ ಏನು ಬೇಕಿಲ್ಲ ಒಂದೇ ಒಂದು ಸಂದೇಶ ಸಾಕಿತ್ತು ನನಗೆ. ಮನಸ್ಸು ಆ ನೋವನ್ನ ತಡೆಯಲು ಒಪ್ಪುತ್ತಿಲ್ಲ.
ಇದೆ ರೀತಿ suhassree ಹಾಗೆ ಮಾಡಿದ. ಕೊಡುವುದಕ್ಕೆ ಆಗುವುದಿಲ್ಲ ಅಂತ ಹೇಳಿದರೆ ಆಗಿತ್ತು. ಚಾಟ್ ನಲ್ಲಿ ನಿಮ್ಮನ್ನ  block ಮಾಡಿ, ಬೇರೊಂದು ಹೆಸರಲ್ಲಿ ಶುರು ಮಾಡಿಕೊಂಡು, ಇನ್ನಿತರರ ವಂಚಿಸುತ್ತಿದ್ದಾರೆ.
ಕಷ್ಟದಲ್ಲಿ ಆದ ಗೆಳೆಯನನ್ನು ದುರುಪಯೋಗ ಪಡಿಸಿಕೊಂಡು ತಮ್ಮ "ಕೆಲಸವನ್ನ" ನಯವಾಗಿ ಮುಗಿಸಿಕೊಂಡು ಹೋಗುವ "ನಯವಂಚಕರ" ಬಗ್ಗೆ ಗೆಳೆಯರೇ ಹುಷಾರಾಗಿರಿ. ಯಾವುದೇ ವಿಷಯದಲ್ಲೂ ನಿಮ್ಮ ಖಾಸಗಿ ವಿಷಯಗಳನ್ನ ದಯವಿಟ್ಟು ಬಹುವಾಗಿ ಹಂಚಿಕೊಳ್ಳಬೇಡಿ.

ಹಾ !! ಇಲ್ಲೊಂದು ಉಪಸಂಹಾರ ಬೇಕು ಅನಿಸುತ್ತಿದೆ.
ನನಗೆ ಕೇಳಿಪಟ್ಟ ಹಾಗೆ ಕೆಲ ನಯವಂಚಕರು, ಗೆಳೆಯರೊಂದಿಗೆ ದೈಹಿಕ ಸಂಪರ್ಕ ಹೊಂದಿ ಅಲ್ಲಿಂದ ಹೊರಡುವಾಗ ಅವರ ರೂಂ ನಲ್ಲಿರುವ ಮೊಬೈಲ್, ವಾಚ್, ಲ್ಯಾಪ್ ಟಾಪ್, ಹಣ ಹಾಗು ಇನ್ನಿತರ ಬೆಲೆಬಾಳುವ ವಸ್ತುಗಳನ್ನ ಕದ್ದು ಓಡಿದಂತ ಸುದ್ದಿ.
ಅಂತವರ ಬಗ್ಗೆ ಪೋಲಿಸ್ ಕಂಪ್ಲೈಂಟ್ ಕೊಡಲಾರದ ಸ್ಥಿತಿ.
ಹಾಗಾಗಿ ಅಂತವರ ಬಗ್ಗೆ ಹುಷಾರಾಗಿರಿ. ಎಷ್ಟೇ ಎಚ್ಚರವಿದ್ದರೂ ಅಂತವರು ಇದ್ದೆ ಇರುತ್ತಾರೆ. ಇಲ್ಲೂ ಮೋಸ , ದಗಾ ನಡೆಯುತ್ತಿದೆ. ಒಂದು ಒಳ್ಳೆಯ ಉತ್ತಮ ಸಂಪರ್ಕ ಏರ್ಪಡುತ್ತಿಲ್ಲ

ಮೋಸ ಮಾಡುವ ನಯವಂಚಕರೆ,
ನಿಮಗೂ ಹೃದಯ, ಮನಸ್ಸು ಇರಲಿ, ಇಲ್ಲಿ ಹಾಸಿಗೆ ಮೇಲೆ ನಡೆಯುವುದು ಒಂದು ಯಾಂತ್ರಿಕ ಕ್ರಿಯೆಯಲ್ಲ. ಅಸಹಜತೆಯಿಂದ ಸಹಜತೆಯಂತೆ ನಡೆಯುವ ಒಂದು ಕಾರ್ಯ. ಹಣ ಕೀಳುವ, ಕದ್ದೊಯ್ಯುವ ಚಾಳಿ ಬಿಡಿ. ಆ ಹಣ, ವಸ್ತು ಎಷ್ಟು ದಿನ ನಿಮ್ಮಲ್ಲಿ ಉಳಿಯುತ್ತೆ. ಆ ವಸ್ತು ನೋಡಿದಾಗೆಲ್ಲ ನಿಮ್ಮ ಮನಸಲ್ಲೂ "ಹೌದು, ನಾನು ಇದನ್ನ ಕದ್ದೆ". ಅಂತ ಅನಿಸೋಲ್ವೆ.
ಯಾರಿಂದಾದರೂ ಹಣ ತೆಗೆದು ಕೊಂಡಿದ್ದರೆ ಸಾಧ್ಯವಾದಷ್ಟು ಹಿಂತಿರುಗಿಸಿ ಕೊಡಲು ಪ್ರಯತ್ನಿಸಿ. ಇಲ್ಲವಾದಲ್ಲಿ "ಆಗುತ್ತಿಲ್ಲ, ಕ್ಷಮಿಸಿ " ಅಂತಾದರೂ ಹೇಳಿ. ಇನ್ನೊಬ್ಬರ ಸುಲಿಗೆ, ಬ್ಲ್ಯಾಕ್ ಮೇಲ್ ಖಂಡಿತ ಮಾಡಬೇಡಿ. 
ಇನ್ನೊಬ್ಬರ ಜೀವನದಲ್ಲಿ ಆಟವಾಡಬೇಡಿ. ಹಾಗೆ ಆದಲ್ಲಿ ನಿಮಗೂ ಬೀದಿ ಬದಿಯ ಸೂಳೆಗೂ ವ್ಯತ್ಯಾಸವೆಲ್ಲಿ. ?

ಕುರುಡು ಪ್ರೀತಿಯಿಂದ..

ಕುರುಡು ಪ್ರೀತಿಯಿಂದ..   ಹೇಗೆ ಬರೆಯಲಿ ಈ ವಿಷಯವನ್ನು ಅಂತ ಅನಿಸುತ್ತಲೇ ಯಾಕೋ ನನ್ನ ಮೇಲೆ ನನಗೆ ಬೇಸರವಾಗುತ್ತಿದೆ. ಅದು ನಾನು ಮಾಡಿದ ತಪ್ಪೋ, ಅವನು ಮಾಡಿದ ತಪ್ಪೋ ಅಥವಾ...