Friday, January 6, 2012

ಗಗನವು ಎಲ್ಲೋ ಭೂಮಿಯು ಎಲ್ಲೋ

             ಜನವರಿಯ ಅಂತಿಮ ದಿನಗಳು  ಚಿಕ್ಕಮಗಳೂರಿನಲ್ಲಿ ಇನ್ನು ಚಳಿ ಬಿಟ್ಟು ಹೋಗಿರಲಿಲ್ಲ. ಅಂದು ಕಾಲೇಜ್ ನ ಪ್ರವಾಸ . ಎಲ್ಲ ಅಂತಿಮ ಡಿಗ್ರಿಯ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಸಿದ್ಧವಾಗಿ ಮುಂಜಾವಿಗೆ ಕಾಲೇಜ್ ಬಳಿ ಸೇರಿದ್ದರು. ಎಲ್ಲರಲ್ಲೂ ನಗು ಕೇಕೆ, ಏನೇನೋ ಗುಸು ಗುಸು ಮಾತು, ಸಿಗರೆಟ್  ಸೇದುವ ಗುಂಪೊಂದು ಅಲ್ಲಿಂದ ದೂರ ಸಾಗಿತ್ತು.
ದೂರದ ಬೆಟ್ಟಗಳ ಹಿಂದೆ ಸೂರ್ಯನ ಆಗಮನಕ್ಕೆ ಮುನ್ಸೂಚನೆಯಂತೆ ಆಕಾಶ  ಹಲವು ರಂಗು ಬಳಿದುಕೊಂಡು ಸಜ್ಜಾಗಿತ್ತು. ಹಕ್ಕಿಗಳ ಚಿಲಿಪಿಲಿ ಸದ್ದು ಅಲ್ಲೆಲ್ಲ ತುಂಬಿತ್ತು. ಬ್ಯಾಗ್ ಭಾರದಿಂದ ದೀಪಕ್ ನ ಭುಜ ನೋಯುತ್ತಿತ್ತು. ಬಸ್ ಬಂದ್ರೆ ಸಾಕಪ್ಪ ಎಂದಾಗಿತ್ತು ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳಿಗೆ.
"ಏನೋ ಹರೀಶ್ ಬರೋಲ್ಲ ಅನ್ಸುತ್ತೆ. ರಾಜು " ಎಂದ ರಾಘವ ರಾಜುಗೆ.
"ಹೌದು ಅವರ ಅಪ್ಪಂಗೆ ದೇಹಾರೋಗ್ಯ ಸರಿ ಇಲ್ಲವಂತೆ. ಆದ್ರೆ ಬರ್ತೀನಿ ಅಂದಿದ್ದ ನಿನ್ನೆ " ಎಂದ ರಾಜು.
ಆ ಮಾತು ಕೇಳಿ ದೀಪಕ್ ಗೆ ಎದೆ ಢವಗುಟ್ಟಿತು. ಇಂದು ಹೇಗಾದರು ತನ್ನ ಮನಸಲ್ಲಿ ಇರೋದನ್ನ ಹೇಳ್ಬೇಕು ಅಂತಿದ್ದ. ಆದರು ಆತ ಬರಬಹುದೆಂಬ ಕಾತರದಿಂದ ದಾರಿಯನ್ನೇ ನೋಡುತಿದ್ದ. ಅಷ್ಟರಲ್ಲಿ ಬಸ್ ಬಂತು. ಎಲ್ಲರು ತಮ್ಮ ತಮ್ಮ ಸೀಟು ಹಿಡಿಯುವ ಕಾತರ ನಾನಿಲ್ಲಿ ನೀನಲ್ಲಿ, ಎಲ್ಲಿದಿಯೋ, ಇಲ್ಲಿಗೆ ಬಾ, ಎಂದೆಲ್ಲ ಗದ್ದಲವೆಬ್ಬಿಸುತ್ತಿದ್ದಾಗಲೇ ಉಸ್ತುವಾರಿಯಾಗಿ ಬಂದ ಇಂಗ್ಲಿಷ್ ಲೆಕ್ಚರರ್ ರಾಮ್ ಪ್ರಸಾದ್ ಬಂದು "ಹಾಯ್ ಗಯ್ಸ್ ಐ ಯಾಮ್ ಹಿಯರ್ " ಎಂದರು. ಎಲ್ಲರು ಅವರಿಗೆ "ಹಲೋ ಸರ್ ಗುಡ್ ಮಾರ್ನಿಂಗ್" ಎಂದರೂ, ದೀಪಕ್ ಏನೂ ಹೇಳದೆ ನಿಂತಿದ್ದಾಗ "ವ್ಹಾಟ್ ದೀಪಕ್, ಏನಾಯ್ತು.. ಒಹ್ ! ನಿನ್ನ ಕ್ಲೋಸ್ ಫ್ರೆಂಡ್ ಹರೀಶ್ ಬಂದಿಲ್ಲ ಅಂತನಾ? " ಎಂದು ಕೇಳಿದರು.
ಅದಕ್ಕೆ ದೀಪಕ್ "ಹಾಗೇನಿಲ್ಲ ಬಂದಿದ್ರೆ ಚೆನ್ನಾಗಿತ್ತು" ಎಂದ ತಡವರಿಸುತ್ತ.
"ಚೀರ್ ಅಪ್ ಮೈ ಬಾಯ್.. ಕಂ ಆನ್ ಗೆಟ್ ಇನ್ ಸೈಡ್" ಎಂದು ಅವರು ತಮ್ಮ ಸ್ಥಳದಲ್ಲಿ ಕುಳಿತರು.
ಅವನು ಖಂಡಿತ ಬರೋದಿಲ್ಲ  ಎಂದು ತಿಳಿದು ಒಲ್ಲದ ಮನಸಿಂದ ಬಸ್ ಹತ್ತುತ್ತ ಕೊನೆಗೊಮ್ಮೆ ಆ ದಾರಿಯನ್ನೊಮ್ಮೆ ನೋಡುವಾಗಲೇ ಹರೀಶ್
"ದೀಪಕ್!! " ಎಂದು ಕೂಗುತ್ತ ಬಂದ. ಆಗ ದೀಪಕ್ ನ ಕಣ್ಣಲ್ಲಿ ಮಿಂಚಿನ ಸಂಚಾರ. ಹತ್ತಿರ ಓಡಿ ಬಂದು ಏದುಸಿರಲ್ಲಿ "ಸಾರೀ ಕಣ್ರೋ.. ಲೇಟ್ ಆಯ್ತಾ?" ಎಂದ.
ಎಲ್ಲರು " ಹಾಗೇನಿಲ್ಲ ಬಾರೋ, ದೀಪಕ್ ನಿನಗಾಗಿ ಕಾಯ್ತಾ ಅಪ್ ಸೆಟ್ ಆಗಿದ್ದ ಅಷ್ಟೇ" ಅಂದರು.
ಅದಕ್ಕವನು "ಹೌದೇನೋ ಗೂಬೆ ಬಾ ಹತ್ತು" ಎಂದು ಇಬ್ಬರು ತಮಗೆ ಗೊತ್ತಾದ ಸ್ಥಳದಲ್ಲಿ ಕುಳಿತರು.
ಸ್ವಲ್ಪ ಸಮಯದಲ್ಲಿ ಬಸ್ ತನ್ನ ಹಾದಿ ಹಿಡಿಯಿತು.
-------------------------------------------------------------------------------------------------------------

ದಾರಿ ಸವೆದಂತೆ ಎಲ್ಲರೂ ಹಾಡು ಕುಣಿತ ಹಿಂದಿನ ವರ್ಷಗಳ ಆಟ ಪಾಠ ಎಲ್ಲವನ್ನ ನೆನಸಿಕೊಂಡು ನಕ್ಕಿದ್ದು,
ನಾಗೇಶ್ ಕಾಗ್ ವಾಡ ಎಂಬೊಬ್ಬ ಪ್ರತಿಭಾವಂತ ವಿದ್ಯಾರ್ಥಿ  ಇದೇ ವರ್ಷ ಆತ್ಮಹತ್ಯೆ ಮಾಡಿಕೊಂಡದ್ದು ಎಲ್ಲರನ್ನ ಬೇಸರ ತಂದಿತ್ತು. ಕೆಲ ಕ್ಷಣ ಮೌನ,, ಎಲ್ಲರಿಗೂ ಆಯಾಸವದಂತೆ ಕಂಡಿತು.  ಅಲ್ಲಲ್ಲಿ ಸಣ್ಣಗೆ ತೂಕಡಿಸುತ್ತಾ ಇದ್ದರು. ಇಂಗ್ಲಿಷ್ ಸರ್ ಯಾವುದೂ ನಾವೆಲ್ ಓದುತ್ತ ಮಗ್ನರಾಗಿದ್ದರು. ಇತ್ತ ದೀಪಕ್ ಹರೀಶ್ ತಮ್ಮ ತಮ್ಮ ಮನೆ ಮುಂದಿನ ಭವಿಷ್ಯದ ಬಗ್ಗೆ ಮಾತಾಡುತ್ತ ಸಾಗಿದ್ದರು. ಹಿಂದಿನ ಸೀಟನಿಂದ ರಘು "ಆಹಾ! ಇಬ್ಬರದ್ದು ಒಳ್ಳೆ ಜೋಡಿ ಕಣ್ರೋ" ಅಂದ.
ಅದಕ್ಕೆ ಹರೀಶ್ ನಕ್ಕು "ಚುಪ್ಪ್" ಅಂತ  ಅವನನ್ನ ಸುಮ್ಮನಾಗಿಸಿದ.
ಮಧ್ಯಾನ್ಹ ಊಟಕ್ಕೆ ಯಾವುದೋ ಸಣ್ಣ ಹೋಟೆಲ್ ಬಳಿ ಬಸ್ ನಿಲ್ಲಿಸಿತು. ಊಟ ಹಾಗು ನಿತ್ಯ ಕರ್ಮ ಮುಗಿಸಿ ಮತ್ತೆ ಪ್ರಯಾಣ ಮುಂದುವರೆಸಿದರು. ಎಲ್ಲಾರಿಗೂ ಸಣ್ಣಗೆ ನಿದ್ರೆಯ ಜೋಂಪು ಹತ್ತಿತು. ಹರೀಶ್ ಸಹ ಸಣ್ಣಗೆ ತೂಕಡಿಸುತ್ತಾ ದೀಪಕ್ ನ ಭುಜ ಮೇಲೆ ಒರಗಿಕೊಂಡು ನಿದ್ರಿಸಿದ. ದೀಪಕ್ ಸಹ ನಿದ್ರೆಗೆ ಜಾರುತಿದ್ದ. ಹರೀಶ್ ನ ತಲೆ ಭಾರಕ್ಕೆ ಮೆಲ್ಲಗೆ ಕಣ್ಣುಬಿಟ್ಟ. ಅವನ ತಲೆಗೂದಲು ದೀಪಕ್ ನ ಮುಖದ ಮೇಲೆ ಓಲಾಡುತಿತ್ತು. ಶಾಂಪೂ ಹಾಕಿದ ವಾಸನೆ ದೀಪಕ್ ನ ಮನಸನ್ನ ಕದಿಯುತ್ತಿತ್ತು.
"ಇಂದು ರಾತ್ರಿ ನನ್ನ ಮನಸ್ಸಿನ ಹೊಯ್ದಾಟ ಹೇಳ್ಬೇಕು" ಹಾಗೆ ಆ ಸುಖವನ್ನ ಅನುಭವಿಸುತ್ತಿದ್ದ ದೀಪಕ್.
ಸಂಜೆಯಾಗುತ್ತ ಬಂದಿತು. ಹಾಗೆ ತಾವು ಉಳಿದು ಕೊಳ್ಳಬೇಕಿದ್ದ ಮೈಸೂರು ಸಮೀಪಗೊಂಡಂತೆ ಎಲ್ಲರು ಮೆಲ್ಲಗೆ ತಮ್ಮ ಮಾತುಕತೆ ಶುರು ಮಾಡಿದರು. ಹರೀಶ್ ಎಚ್ಚರ ಆಗಿ " ಸಾರೀ ದೀಪು" ಎಂದು ಎದ್ದ. "ನೋ ಪ್ರಾಬ್ಲಮ್ ಹರಿ" ಎಂದ.
ಅಲ್ಲೇ ಹೋಟೆಲ್ನಲ್ಲಿ ಎಲ್ಲರು ಆ ರಾತ್ರಿ ಉಳಿದುಕೊಂಡು  ನಾಳೆ ಮಾನಸ ಗಂಗೋತ್ರಿ ಗೆ ಹೋಗ್ಬೇಕು ಎಲ್ಲವು ಬೆಳಿಗ್ಗೆ 6 ಕ್ಕೆ ಸಿದ್ಧರಾಗಿ ಎಂದು ಲೆಕ್ಚರ ರಾಮ್  ಪ್ರಸಾದ್ ತಮ್ಮ ಸ್ನೇಹಿತನ ಮನೆ ದಾರಿ ಹಿಡಿದರು. ಅವರಿಗೆ ಗೊತ್ತಿತ್ತು ಈಗಿನ ಕಾಲದ ವಿದ್ಯಾರ್ಥಿಗಳ ಬಗ್ಗೆ.
ಎಲ್ಲರು ತಮ್ಮ ರೂಂ ಸೇರಿಕೊಂಡರು. ದೀಪಕ್ - ರಾಘವ ಗೆ ಒಂದು ರೂಂ ಅಲಾಟ್. ಆಗಿತ್ತು. ಹರೀಶ್ ನ ರೂಂ ನಲ್ಲಿ ಸುಜಯ್ ಸೇರಿಕೊಂಡಿದ್ದ. ಹಾಗು ಹೀಗೂ ಗೋಗರೆದು ದೀಪಕ್ ಹರೀಶ್ ರೂಂ ಸೇರಿಕೊಂಡ. ಎಲ್ಲರು ಊಟ ಮುಗಿಸಿ ಪಕ್ಕದ ಆಲ್ವಿನ್ ರೂಂ ಗೆ ಹೊರಟರು. ಮೆಲ್ಲಗೆ ತಮ್ಮ ತಮ್ಮ ಬ್ಯಾಗ್ ಒಳಗಿಂದ ಬೀರ್, ವ್ಹಿಸ್ಕಿ ಎಲ್ಲ ತೆಗೆದು ಕುಡಿಯಲು ಶುರು ಮಾಡಿದರು. ಒಂದಿಬ್ಬರು ಬಿಟ್ಟು. ಹರೀಶ್ ಸಹ ಕುಡಿಯಲು ಶುರು ಮಾಡಿದಾಗ ದೀಪಕ್
"ಹರೀ .. ಲಾಸ್ಟ್ ಟೈಮ್ ಏನಾಗಿತ್ತು ಗೊತ್ತ ?" ಎಚ್ಚರಿಸಿದ.
 "ಸ್ವಲ್ಪ ವೆ ದೀಪು.. ಡೋಂಟ್ ವರಿ" ಎಂದು ಬೀರ್ ಕುಡಿದ. ಎಲ್ಲರ ಕಿರುಚಾಟ ನಗು, ಕೇಕೆ ಹೋಟೆಲ್ ನ ಮ್ಯಾನೇಜರ್ ನ ನಿದ್ರೆಗೆಡಿಸಿತ್ತು. ಬಂದು ಬಾಗಿಲು ಬಡಿದ. ಎಲ್ಲರೂ ತಮ್ಮ ರೂ ಗಳಿಗೆ ಸೇರಿದರು. ಹರೀಶ್ ಕುಡಿದ ಅಮಲಿನಲ್ಲಿ ನಿದ್ರೆ ಗೆ ಜಾರಿದ.
ಅಂದಿನ ದೀಪಕ್ ನ ಮನದಾಳದ ಮಾತು ಅಲ್ಲೇ ಉಳಿಯಿತು.
-------------------------------------------------------------------------------------------------------------

 ಬೆಳಿಗ್ಗೆ ಎಲ್ಲರು ತಮ್ಮ ಸ್ನಾನಾದಿಗಳನ್ನು ಮುಗಿಸಿ ನೋಟ್ಸ್ ಗಳೊಂದಿಗೆ ವಿಶ್ವವಿದ್ಯಾಲಯಕ್ಕೆ ಪ್ರಾಜೆಕ್ಟ್ ಸಲುವಾಗಿ ಸಂಜೆಯವರೆಗೂ ಹಲವು ವಿಷಯ ಸಂಗ್ರಹಿಸಿ ಊಟ ಕಾಫಿ ಎಲ್ಲ ಮುಗಿಸಿ ತಮ್ಮ ರೂಂ ಕಡೆ ಹೊರಟರು. ಎಲ್ಲರಿಗು ಸಾಕಾಗಿತ್ತೇನೋ ಎಲ್ಲ ಬೇಗ ಮಲಗಿದರು ಹರೀಶ್ ಮಲಗಲಿಲ್ಲ. ಅವನು ಹೊರಳಾಡುವ ಸದ್ದಿಗೆ ದೀಪು ಎದ್ದು
"ಏನಾಯ್ತು ಹರಿ ? ಅಪ್ಪನ ಆರೋಗ್ಯ ಹೇಗಿದೆ ? ನೆನಪಾಗ್ತಿದೆಯ?" ಅಂದ . 
"ಹೂ ದೀಪು ತುಂಬಾ, ಡಾಕ್ಟರ , ಸ್ವಲ್ಪ ದಿನ ಇಲ್ಲ ವರ್ಷ ಬದುಕಿರಬಹುದು ಅಂತ ಹೇಳಿದ್ದಾರೆ. ನನಗೆ ತುಂಬಾ ಭಯ ಆಗಿದೆ" ಎಂದು ಸಣ್ಣಗೆ ಕಣ್ಣಲ್ಲಿ ನೀರು ತುಂಬಿಕೊಂಡು ಹೇಳಿದ.
ದೀಪಕ್ ಭಯದಿಂದ ಎದ್ದು ಕುಳಿತು " ಇಲ್ಲಾ ಹರಿ ಏನೂ ಆಗೋಲ್ಲ ಪ್ಲೀಸ್ ಅಳಬೇಡ ನಾನಿಲ್ಲವ ಪ್ಲೀಸ್" ಎಂದು ಅವನನ್ನ ತಬ್ಬಿಕೊಂಡ. ಹರೀಶನ ಅಳುವು ಇನ್ನು ಗಟ್ಟಿಯಾಯಿತು. ಸಮಾಧಾನ ಪಡಿಸುತ್ತಾ ಹಾಗೆ ನಿದ್ರೆ ಮಾಡಿಸಿದ ದೀಪಕ್. ಬೆಳಿಗ್ಗೆ ಮತ್ತೆ ವಾಪಾಸ್ ತಮ್ಮ ಊರಿಗೆ ಹೋಗಬೇಕಾಗಿತ್ತು. ಎಲ್ಲರು ಬೇಗನೆ ಎದ್ದರೂ ದೀಪಕ್ ಎದ್ದಿರಲಿಲ್ಲ.
 "ದೀಪು ಎದ್ದೇಳೋ ಟೈಮ್ ಆಯ್ತು " ಅಂತ ಹರಿ ದೀಪು ನ ಕೈ ಹಿಡಿದು ಹೋದಾಗ ದೀಪು  ತುಂಬಾ ಜ್ವರದಿಂದ ನಡುಗುತಿದ್ದ. ಅದನ್ನ ಕಂಡು ಹರ,
"ಏನಾಯ್ತೋ. ರಾತ್ರಿ ಚೆನ್ನಾಗಿದ್ದೆ. ರಾಘು, ಚಂದು ಬನ್ರೋ ಇಲ್ಲಿ ದೀಪು ಗೆ ಜ್ವರ ಬಂದಿದೆ ಡಾಕ್ಟರ ಗೆ ತೋರಿಸಬೇಕು." ಎಂದು ಹೇಳಿದಾಗ ಹತ್ತಿರದಲ್ಲೇ ಇದ್ದ ನರ್ಸಿಂಗ್ ಹೋಂ ಗೆ ಸೇರಿಸಿದರು. ಅಲ್ಲಿ ಡಾಕ್ಟರ ಇನ್ನು ಎರಡು ದಿನ ರೆಸ್ಟ್ ತೆಗೆದುಕೊಳ್ಳಬೇಕು, ಇಂತ ಪರಿಸ್ಥಿತಿಯಲ್ಲಿ ದೂರ ಪ್ರಯಾಣ ಸಲ್ಲದು ಎಂದಾಗ ಹರೀಶ್ ನಾನು ದೀಪು ನ ನೋಡಿಕೊಳ್ತೀನಿ ಅಂತ ಅಲ್ಲೇ ಉಳಿದ.
ಎಲ್ಲರು ಭಾರ ಮನದಿಂದ ವಾಪಸ್ಸು ತೆರಳಿದರು. ಹರೀಶ್ ಹಗಲು ರಾತ್ರಿ ಅವನ ಆರೈಕೆ ಮಾಡಿ ಸರಿ ಹೋದಮೇಲೆ ತಮ್ಮ ಸ್ಥಳಕ್ಕೆ ವಾಪಸ್ಸಾದರು. ದೀಪಕ್ ತುಂಬು ಹೃದಯದಿಂದ ವಂದನೆಗಳನ್ನ ತಿಳಿಸುತ್ತ ದಾರಿಯುದ್ದಕ್ಕೂ ಅವನ ಭುಜಕ್ಕೆ ಒರಗಿ ನಿದ್ರಿಸಿ ಮನೆಗೆ ತೆರಳಿದ.
-----------------------------------------------------------------------------------------------------

ಹಾಗೆಯೇ ಪರೀಕ್ಷೆಗಳು ಕೊನೆಯ ದಿನಗಳಿಗೆ ಬಂದವು. ಎಲ್ಲರು ಭಾರ ಮನಸಿಂದ ಪರೀಕ್ಷೆ ಮುಗಿಸಿ ಮತ್ತೆ ಸಿಗುವ ಅಂತ ಹೇಳಿ ಹೊರಟರೂ
ದೀಪಕ್ ಹರೀಶನ  ಆಗಮನಕ್ಕೆ ಕಾಯ್ತುತ್ತ ಇದ್ದ. ಅವನು ಈ ಬಾರಿ ಕಾಲೇಜ್ ಗೆ ಮೊದಲಿಗನಾಗಿ ಬರುವ ಸೂಚನೆ ಬಂದಿತ್ತು.
ಆಗಲೇ ಅವನಿಗೆ ಬೆಂಗಳೂರಿನ ಉತ್ತಮ ಕೆಲಸಕ್ಕೆ ಕರೆ ಸಹ ಬಂದು ಅಲ್ಲಿಗೆ ಒಂದು ತಿಂಗಳ ಒಳಗೆ ಸೇರಿಕೊಳ್ಳುವ ವಿಷಯವನ್ನ 
ದೀಪುಗೆ ತಿಳಿಸಿದ್ದ.  ಅಂತು ಹರೀಶ್ ಪ್ರಿನ್ಸಿಪಾಲ್ ರೂಂ ನಿಂದ ಹೊರಬಂದ. ಸಂಜೆ ಆರು ಆಗುತಿತ್ತು. ತಾವು ಹೊರಡುವ ಪ್ರೈವೇಟ್ ಬಸ್ ತಪ್ಪಿ ಹೋಗಿತ್ತು. ಅರ್ಧ ಗಂಟೆ ದಾರಿ ನಡಕೊಂಡು ಹೋಗುವ ಅಂತ ದೀಪಕನೆ ಹರಿಯನ್ನ ಕರಕೊಂಡು ತಮ್ಮ ದಾರಿ ಹಿಡಿದರು. ಸಂಜೆ ಸೂರ್ಯ, ತಿಳಿಗಾಳಿ ಹೊಂಬೆಳಕು ಇದ್ದರೂ ಇಬ್ಬರ ಮನಸಲ್ಲಿ ಮೌನವಾಗಿದ್ದರು. ಹರೀಶ್ " ದೀಪು ಏನೋ ಮಾತಾಡೋ" ಅಂದ.
"ಹೂಂ! ನೀನೇನು ಮುಂದಿನ ತಿಂಗಳು ಹೋಗ್ತಿಯ. ಮರೆತೇ ಬಿಡ್ತಿಯ ನನ್ನ ಅಲ್ವ" ಅಂದ ನೋವಿನಿಂದ.
"ಏನು ಮಾಡಲಿ ಹೇಳು ಇಲ್ಲೇ ಇದ್ದರೆ ಓದಿ ಏನು ಸಾಧನೆ ಮಾಡೋಕೆ ಆಗೋಲ್ಲ.ಒಳ್ಳೆ ಕೆಲಸ, ಪಗಾರ ಎಲ್ಲ ಇದೆಯಲ್ಲ. ನೀನು ಬಂದುಬಿಡು. ಸ್ವಲ್ಪ ದಿನ ಒಟ್ಟಿಗೆ ಇರೋಣ. ಏನಂತಿಯಾ ?" ಅಂದ ಹರಿ.
"ಜೀವನ ಪರ್ಯಂತ ಇರೋದಿಕ್ಕೆ ಆಗೋಲ್ವ ಹರೀ ?" ಎಂದ ದೀಪು.
"ಅದು ಹೇಗೆ ಸಾಧ್ಯ ದೀಪು?" ಹರಿ ಅನ್ನಲು, ದೀಪಕ್  "ಹರಿ, ಹರಿ ಐ ಲವ್ ಯು ಕಣೋ ನಿನ್ನ ಬಿಟ್ಟು ಇರೋದಿಕ್ಕೆ ಆಗೋಲ್ಲ " ಅಂದ.
"ನನಗೂ ನಿನ್ನ ಬಿಟ್ಟು ಇರೋಕೆ ಆಗೋಲ್ಲ. ಏನು ಮಾಡಲಿ ?"
"ನಾನು ನಿನ್ನ ನಿಜವಾಗ್ಲೂ ಪ್ರೀತಿಸ್ತಾ ಇದ್ದೀನಿ ಕಣೋ. ಬದುಕಿದರೆ ನಿನ್ನ ಜೊತೇಲಿ ಇಲ್ಲಾಂದ್ರೆ ಸಾವೇ ಗತಿ" ಅಂದ ಹರಿ.
"ದೀಪಕ್ !! ಹುಚ್ಚನ ಹಾಗೆ ಮಾತಾಡಬೇಡ. ನಮ್ಮ ನಮ್ಮ ದಾರಿ ಭವಿಷ್ಯ ನೋಡ್ಕೊಬೇಕಲ್ಲ. ನೀನು ನನಗಿಂತ ಶ್ರೀಮಂತ,  ಒಳ್ಳೆ ಕೆಲಸ ಹುಡುಕು, ಒಂದು ಒಳ್ಳೆ ಹುಡುಗಿ ನೋಡಿ ಮದುವೆ ಆಗು. ಜೀವನ ಸಾಗಿಸು" ಎಂದ ಹರಿ.
" ಇಲ್ಲ ಹರಿ ನಿನ್ನ ನಾನು 10ನೆ ತರಗತಿಯಿಂದಲೇ ಪ್ರೀತಿಸ್ತ ಇದ್ದೀನಿ" ಎಂದು ದೀಪಕ್ ಹರಿಯನ್ನು ಹಿಂದಿನಿಂದ ತಬ್ಬಿಕೊಂಡ.
ಇದರಿಂದ ತಬ್ಬಿಬ್ಬಾಗಿ ಅವನ ಹಿಡಿತ ಸಡಿಲಿಸಿಕೊಂಡು " ದೀಪಕ್, ಏನಿದೆಲ್ಲ? ನೀನೇನು ಗಂಡಸೋ ಇಲ್ಲಾ...?
ನನ್ನ ಬಾಯಲ್ಲಿ ಕೆಟ್ಟ ಮಾತು ಬರಿಸ್ಬೇಡ. ಅದೆಲ್ಲ ಈ ಪ್ರಪಂಚದಲ್ಲಿ ಸಾಧ್ಯ ಇಲ್ಲ ಆಗೋದು ಇಲ್ಲ. ಆಸ್ವಾಭಾವಿಕ ವಾಗಿ ಆಡಬೇಡ" ಎಂದು ಕಿರುಚಿದ.
"ಇಲ್ಲ ಹರೀ ನನಗೇನೋ ಗೊತ್ತಿಲ್ಲ ನಿನ್ನ ನೋಡಿದಾಗಿಂದ ಏನೋ ಸೆಳೆತ ನಿನ್ನಲ್ಲಿ, ನಾ ನಿನ್ನವ ಆಗ್ಬೇಕು ನಿನ್ನ ಪ್ರೀತಿಯ ಹೃದಯದಲ್ಲಿ ಮನೆ ಮಾಡ್ಕೊಬೇಕು. ನೀ ನನ್ನ ಜೀವನ ಸಂಗಾತಿ ಆಗ್ಬೇಕು ಅಂತ  ಇಷ್ಟ ಪಡ್ತಾ ಇದ್ದೀನಿ" ಎಂದು ಅಳುತ್ತ ದೀಪಕ್.
"ಷಟ್ ಆಪ್. ದೀಪಕ್ ಏನೇನೋ ಮಾತಾಡಬೇಡ. ನೀ ಈ ತರ ಅಂತಿದ್ರೆ ನಿನ್ನ ಫ್ರೆಂಡ್ ಶಿಪ್ ಮಾಡ್ತಾನೆ ಇರಲಿಲ್ಲ. ಏನೋ ಆತ್ಮೀಯ ಬಾಲ್ಯದ ಗೆಳೆಯ ಅಂತಿದ್ದೆ"
ಎಂದು ಕೋಪಗೊಂಡ ಹರಿ.
"ಹರಿ ಪ್ಲೀಸ್ ಹರಿ ಹೀಗೆಲ್ಲ ಮಾತಾಡಬೇಡ. ನೀನಿಲ್ಲ ಅಂದ್ರೆ ನನಗೆ ಬದುಕಿ ಇರೋಕೆ ಆಗೋಲ್ಲ" ಅಂದು ಮತ್ತೆ ಅವನ ಕೈ ಹಿಡಿಯಲು ಹೋದ 
ದೀಪಕ್ ನನ್ನು ದೂರ ತಳ್ಳಿದ ಹರೀಶ್. 
"ನೋಡು ದೀಪಕ್ ನೀನು ಹೀಗೆಲ್ಲ ಆಡಬೇಡ ಸುಮ್ಮನೆ ಮನಗೆ ಹೋಗುವ. ಎಲ್ಲ ಮರೆತುಬಿಡು. ಮನಗೆ ಬೇಗ ಹೋಗ್ಬೇಕು" ಎಂದ ಹರಿ.
ಹಾಗೆ ಅಳುತ್ತ ಕುಸಿದು ಅಲ್ಲೇ ಕುಳಿತು ಬಿಟ್ಟ ದೀಪಕ್. ಹರಿ ಸ್ವಲ್ಪ ದೂರ ಹೋಗಿದ್ದ,  ಮತ್ತೆ  ಹಿಂತಿರುಗಿ
"ದೀಪಕ್, ದೀಪಕ್ ಬಾ ಮನೆಗೆ ಹೋಗುವ. ನೋಡೋ you are my best friend in this world. ಆದ್ರೆ ನೀನು ಹೀಗೆ..?"
"ಹರಿ ನಿನ್ನ ಪ್ರೀತಿಸೋದು ಒಂದೇ ನಂಗೆ ಗೊತ್ತಿರೋದು. ಒಂದೇ ಒಂದು ಸಲ ನಾ ನಿನ್ನ ಪ್ರೀತಿಸ್ತೀನಿ ಅಂತ ಹೇಳೋ" ಅಂತ ಗೋಗರೆದ  ದೀಪಕ್.
"ದೀಪಕ್ ಅದೆಲ್ಲ ಆಗೋಲ್ಲ. ಪ್ಲೀಸ್. ನಡಿ ಈಗ ಮನೆಗೆ ಹೋಗುವ" ಏಳಿಸಿ ದೀಪಕ್ ಮನೆ ಬಳಿ ನಿಲ್ಲಿಸಿ 
"ದೀಪಕ್. ಒಂದು ಮಾತು ನಿನಗೆ ನೋವಾಗಬಹುದು. ನಮ್ಮ ಗೆಳೆತನ  ಶಾಶ್ವತವಾಗಿ ಇರಬೇಕು ಅಂದ್ರೆ ದಯವಿಟ್ಟು ನಾಳೆಯಿಂದ ನನ್ನ ಭೇಟಿಯಾಗಲು ಬಯಸಬೇಡ. ವಿಷಯ ಎಲ್ಲಿಂದ ಎಲ್ಲಿಗೋ ಹೋಗುತ್ತೆ. ನಿನ್ನ ಈ ವಿಷಯ ನಾನು ಯಾರ ಹತ್ರನು ಹೇಳೋಲ್ಲ. ಇದು ನನ್ನ ಮಾತು. ಈ ಮಾತಿಗೆ ತಪ್ಪಲ್ಲ. Be good boy. Don't act like a stupid. " ಎಂದು ಅಲ್ಲಿಂದ ಕಾಲು ತೆಗೆದ ಹರೀಶ್. 
ಅವನನ್ನೇ ನೋಡುತ್ತಾ ನಿಧಾನವಾಗಿ ತನ್ನ ಮನೆ ಸೇರಿದ. 
--------------------------------------------------------------------------------------

ದಿನಗಳು ಸರಿಯುತಲಿದ್ದವು. ಹರೀಶನ ಮನೆ ಊರ ಅಂಚಿನ ಮನೆಯಾದ್ದರಿಂದ ಮುಖ್ಯರಸ್ತೆ ದಾಟಲು ಅವನ ಮನೆ ಸಾಗಿ ಮುಂದೆ ಹೋಗಬೇಕಿತ್ತು. ಅಲ್ಲೊಂದು ಬಸ್ ನಿಲ್ದಾಣವೂ ಇತ್ತು . ದೀಪಕ್ ನ ದಿನಚರಿ ಬೆಳಿಗ್ಗೆ ಅಲ್ಲಿಗೆ ಹೋದರೆ ಮಧ್ಯಾನ ಊಟಕ್ಕೆ ಮತ್ತೆ ಸಂಜೆ ಹೋದರೆ ಕತ್ತಲು ಆಗುವವರೆಗೂ ಅಲ್ಲೇ ಇದ್ದು ಹರೀಶ ನ ಮುಖವನ್ನ ಒಮ್ಮೆಯಾದರು ನೋಡಿ ಬರುತಿದ್ದ. 
ಒಮ್ಮೆ ಸಂಜೆ ಬಸ್ ನಿಲ್ದಾಣದಲ್ಲಿ ದೀಪಕ್ ಒಬ್ಬನೇ ಕುಳಿತಿರುವಾಗ ಬೈಕ್ ನಲ್ಲಿ ಹರೀಶ್ ಬಂದು
"ನಿನಗೇನು ಮಾಡೋಕೆ ಕೆಲಸ ಇಲ್ಲವ. ಇಲ್ಲೇ ಕೂತಿದ್ದಿಯಲ್ಲ. ನಾನ್ ಸೆನ್ಸ್" ಎಂದ.
" ನಿನ್ನ ಒಂದು ದಿನ ನೋಡದೆ ಇದ್ದರೆ ನನಗೆ ಆಗೋಲ್ಲ ಹರಿ. ನನ್ನ ಈ ಪ್ರೀತಿನ ಒಪ್ಪಿಕೊ" ಎಂದ ದೀಪಕ್.
"ಮತ್ತದೇ ಶುರು ಮಾಡಬೇಡ ದೀಪಕ್. ನನ್ನಲ್ಲಿ ಆ ರೀತಿ ಭಾವನೆಗಳು ಇಲ್ಲ"
"ನನ್ನಲ್ಲಿ ಇದೆಯಲ್ಲ?" 
"ಅದು ನಿನ್ನ ತಪ್ಪು"
"ಹರಿ ಅಂದು ಮೈಸೂರಲ್ಲಿ ನಂಗೆ ಜ್ವರ ಬಂದಾಗ ಯಾಕೋ ನನ್ನ ಜೊತೆ ಇದ್ದು ನನ್ನ ನೋಡಿಕೊಂಡೆ? ನನ್ನ ಮೇಲಿನ ಪ್ರೀತಿಗಾಗಿ ತಾನೇ?
"ಇಲ್ಲ ಅದು ಸ್ನೇಹಕ್ಕಾಗಿ"
"ನಾ ಅದನ್ನ ಪ್ರೀತಿ ಅಂತ ಅಂದುಕೊಂಡಿದ್ದೀನಿ"
"ದೀಪಕ್ ಈ ಪುರುಷ ಪುರುಷ ಪ್ರೇಮ ಕಾಮವನ್ನ ಮಾಡೋ ಜನಗಳನ್ನ ಏನು ಅಂತಾರೆ ಗೊತ್ತ?"
"ಪ್ರಪಂಚ ಏನೇ ಹೇಳಿದರು ನಾನು ನಿನ್ನ ಪ್ರೀತಿಸೋದು ಬಿಡೋಲ್ಲ. ನೀ ನನ್ನವಾನಾಗ್ತಿಯೋ ಇಲ್ಲವೋ. ನಾನಂತೂ ನಿನ್ನ ಮನಸಾರೆ ಪ್ರೀತಿಸಿದ್ದಿನಿ, 
ಪ್ರೀತಿಸ್ತ ಇರ್ತೀನಿ ಸಾಯೋವರೆಗೂ" ಅಂದ ದೀಪಕ್.
"ಗೆಟ್ ಲಾಸ್ಟ್ !!" ಎಂದು ತನ್ನ ಬೈಕ್ ಸ್ಟಾರ್ಟ್ ಮಾಡಿ ತನ್ನ ಮನೆಗೆ ಹೋದ  ಸ್ವಲ್ಪ ಸಮಯದ ನಂತರ ಬಂದು 
"ತಗೋ ನೀನು ನನಗೆ ಕೊಟ್ಟ ಬರ್ತ್ ಡೇ ಗಿಫ್ಟ್ " ಎಂದು ದೀಪಕ್ ಕೊಟ್ಟಿದ್ದ ಟೀ -ಶರ್ಟ್, ಗ್ರೀಟಿಂಗ್ಸ್ ಮತ್ತಿತ್ತರ ವಸ್ತುಗಳನ್ನ ಅವನ ಕೈಯಲ್ಲಿ ತುರುಕಿ ಹಿಂತಿರುಗಿ ಹೋದ.
ದೀಪಕ್ ಅವನ್ನೆಲ್ಲ ತುಂಬಿದ ಕಣ್ಣುಗಳಿಂದ ತನ್ನೆದೆಗೆ ಅವುಚಿಕೊಂಡು ಮನೆಯಕಡೆ ಸಾಗಿದ. 
ಹಾಗೆ ಒಂದೆರಡು ದಿನ ಅದೇ ನಿಲ್ದಾಣದಲ್ಲಿ ಬಂದು ಕುಳಿತ ದೀಪಕನನ್ನು ಕಂಡು ಕಾಣದಂತೆ ಓಡಾಡುತಿದ್ದ ಹರೀಶ್.
ತಿಂಗಳು ಕಳೆದಂತೆ ಹರೀಶ್ ತನ್ನ ಕೆಲಸದ ಮೇರೆಗೆ ಬೆಂಗಳೂರಿಗೆ ಹೊರಡುವ ಹಿಂದಿನ ದಿನ ದೀಪಕ್ ಭೇಟಿಯಾದ. 
"ಮತ್ತೆ ಸಿಗೋಲ್ವ ಹರೀಶ್?"
"ನೋಡುವ ಸಾಧ್ಯ ಆದ್ರೆ " ಎಂದ.
"ನೀನು ಸಿಕ್ಕಿಲ್ಲ ಅಂತ ಈಗೇನು ಬೇಸರ ಇಲ್ಲ. ಹಾಗಂತ ನಾನೇನು ಸಾಯೊಲ್ಲ. ನಿನಗಂತ ಒಂದು ಗಿಫ್ಟ್ ತಂದಿದ್ದೀನಿ"
"ನನಗೇನು ಬೇಡ ದೀಪಕ್. ನೀನು ಒಳ್ಳೆ ಮನುಷ್ಯನಾಗಿ ಬಾಳೋದು ನನಗೆ ಬೇಕು ಅದೇ ಗಿಫ್ಟ್. ಓಕೆ. ನಾಳೆ ಬೆಳಿಗ್ಗೆ ಹೊರಡುತ್ತಾ ಇದ್ದೀನಿ" ಎಂದ.
ಹಾಗೆ ಅವರಿಬ್ಬರೂ ಒಂದೆರಡು ಕ್ಷಣ ಮೌನವಾಗಿದ್ದರು. 
"ಇದು ನಿನ್ನ ಹುಚ್ಚು"
"ನನ್ನ ನೈಜ ಪ್ರೀತಿ ಸಾಯೋವರೆಗೂ ಇರುತ್ತೆ"
 "ಸರಿ ನಾನು ಬರಲೇ. ಇನ್ನು ಪ್ಯಾಕ್ ಮಾಡಿಲ್ಲ" ಎಂದು ಆತುರವಾಗಿ ಅಲ್ಲಿಂದ ಹೊರಟ ಹರೀಶ್.
ಮೌನರೋದನದ ಭಾರ ಮನದಿಂದ ದೀಪಕ್ ನಿಂತಲ್ಲಿಯೇ ನಿಂತ. 
----------------------------------------------------------------------------------------------------------
ದಿನ ಕಳೆದಂತೆ ಹರೀಶ್ ಒಳ್ಳೆ ಉದ್ಯೋಗಕ್ಕೆ ಹೈದರಾಬಾದ್ ಹಾರಿದ. ಅವನು ತನ್ನ ತಂದೆ ತಾಯಿ ತಮ್ಮನನ್ನ ಬೆಂಗಳೂರಿಗೆ
ಕರೆಸಿಕೊಂಡಿದ್ದ. ಅವನ ಅಪ್ಪ ಅಮ್ಮನ ಇಚ್ಚೆಯಂತೆ ಮದುವೆಗೂ ಸಿದ್ಧನಾದ. ಅವನೂ ಹಾಗು ಅವನ ಅಮ್ಮ ಮಾಡುವೆಗೆ ಆಮಂತ್ರಿಸಲು 
ಊರಿಗೆ ಹೋದಾಗ ದೀಪಕನ ನೆನಪು ಕಾಡಿತು. ಅವನಿಗೂ ಹೇಳೋ ಅಂತ ಅಮ್ಮ ತಾಕೀತು ಮಾಡಿದಾಗ , ಅವನ ಮನೆ ಮುಂದೆಯೇ ದೀಪಕನ ತಂಗಿ ಸಿಕ್ಕಿ 
"ನಿನಗೆ ಗೊತ್ತಿಲ್ಲ್ವ, ದೀಪಕ್ ಕೆಲಸದ ಬಾಂಬೆ ಗೆ ಹೋಗಿ ಆರು ತಿಂಗಳ ಮೇಲಾಯ್ತು. ಎರಡು ತಿಂಗಳ ಹಿಂದೆ ಬಂದು ಹೋದ"
"ಒಹ್ ಹೌದ. ಬಾಂಬೆ ಅಂದಮೇಲೆ ಒಳ್ಳೆ ಕೆಲಸವೆ ಇರಬೇಕಲ್ಲ?"
"ಅದೇನು ನಂಗೆ ಗೊತ್ತಿಲ್ಲ.  ಹರೀಶ್. ಏನೋ ಮದುವೆ ಅಂತೆ ನಿನಗೆ?"
"ಹೌದು ಶಾಲಿನಿ, ಬೆಂಗಳೂರಲ್ಲಿ, ಹುಡುಗಿ ನನ್ನ ಜೊತೆ ಕೆಲಸ ಮಾಡುವವಳು ತೆಲುಗು ಹುಡುಗಿ. ಅಪ್ಪ ಅಮ್ಮನು ಒಪ್ಪಿದ್ದಾರೆ. ಬಂದುಬಿಡಿ ಮನೆಯಲ್ಲಿ ಇನ್ವಿಟೇಶನ್  ಕೊಟ್ಟಿರ್ತೀನಿ, ಬೈ " ಎಂದು ಹೇಳಿ ಹೊರಟ ಹರೀಶ್.

ಮನದಲ್ಲಿ "ಸಧ್ಯ ಈಗಲಾದರು ದೀಪು ಗೆ ಒಳ್ಳೆ ಬುದ್ಧಿ ಬಂತಲ್ಲ" ಅಂತ ಸಮಾಧಾನ ಪಟ್ಟುಗೊಂಡ.
 ಹರೀಶ್ ತನ್ನ ಮದುವೆ, ಕೆಲಸದ ಒತ್ತಡ ಹೈದರಾಬಾದ್, ಹಾಗೆ ಒಮ್ಮೆ ಅಮೆರಿಕ ನು ಹಾರಿ ಬಂದ. ತಂದೆಯೂ ಮೃತರಾಗಿ ತಿಂಗಳು ಕಳೆದಿತ್ತು. ತಮ್ಮ ಎಂ. ಬಿ . ಎ. ಮಾಡಲು ದಿಲ್ಲಿಗೆ ಹೋಗಿದ್ದ. ಅಮ್ಮ ಮನೆ ನೋಡಿಕೊಂಡು ಇರುತಿದ್ದರು. ಹರೀಶ್ ಹಾಗು ತನ್ನ ಪತ್ನಿ ರಾಧಿಕ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಇಬ್ಬರು ಒಂದೇ ಕಾರಿನಲ್ಲೇ ಕಂಪನಿಗೆ ಹೋಗಿ ಬರುತ್ತಿದ್ದರು. 
ಬೆಂಗಳೂರಿನ ಟ್ರಾಫಿಕ್ ಇವರನ್ನೂ ಬಿಡಲಿಲ್ಲ. ದಿನಾಲು ಸಂಜೆ ಅರ್ಧ ಗಂಟೆಯಾದರೂ  ಟ್ರಾಫಿಕ್ನಲ್ಲಿ ಸಿಕ್ಕು ತೊಂದರೆ ಪಡುತ್ತ ತಮ್ಮ ಮನೆ ಸೇರುತ್ತಿದ್ದರು.

" ಹರೀಶ್ ಆ ರೋಡ್ ನಲ್ಲಿ ಹೋಗಬೇಡ ತುಂಬಾ ಜನ ಭಿಕ್ಷುಕರು ತೊಂದ್ರೆ ಕೊಡ್ತಾರೆ" ಎಂದಳು  ರಾಧಿಕ. 
"ಹೇಗೂ ಬಂದೆವಲ್ಲ, ಒಂದೈದು ರುಪಾಯಿ ಕೊಟ್ರೆ ಆಯ್ತು" ಅಂದ ಹರೇಶ್.
"ದಾನಶೂರ ಕರ್ಣ. ಸರಿ ನಡೀರಿ " ಎಂದಳು.
ಅಲ್ಲಿ ಪೋಲಿಸ್ ಜತೆ ಯಾರೋ ಜಗಳ ಆಡುತ್ತ ರಸ್ತೆ ಅಡ್ಡ ಗಟ್ಟಿದ್ದರು. 
"ಒಹ್ ! ಇವರದೊಂದು ತೊಂದರೆನ?" ಅಂದಳು ರಾಧಿಕಾ. 
"ಯಾರದ್ದು? ಪೋಲಿಸರದ್ದೆ? "  ಅನ್ನಲು.
"ಅಲ್ಲ ಹರೀಶ್, ಹಿಜಡಾ, ಮಂಗಳ ಮುಖಿ ಗಳದ್ದು" ಎಂದಳು.
"ಅವರೇನು ಮಾಡ್ತಾರೆ ದುಡ್ಡು ಕೊಟ್ಟರೆ ಹರಸಿ ಹೋಗ್ತಾರೆ" ಎಂದು ವ್ಯಂಗ್ಯ ವಾಗಿ ನಕ್ಕ. 
"ವಿಂಡೋಸ್ ಕ್ಲೋಸ್ ಮಾಡಿ" ಎಂದು ರಾಧಿಕ ಹೇಳುವಾಗಲೇ ಹರೀಶನ ಬದಿಯ ಕಾರಿನ ಕಿಟಕಿ ಗಾಜನ್ನು 'ಟಕ್ಕ್, ಟಕ್ಕ್' ಎಂದು ಬಡಿದು ಕಾರ ಒಳಗೆ ಕೈ ತೂರಿಸಿದರು ಒಬ್ಬ ಮಂಗಳ ಮುಖಿ. 
ಕೈ ನೋಡುತ್ತಲೇ ದಂಗು ಬಡಿದ, ಹರೀಶ್ 'ಯಾರು?' ಎಂದು ಅವರನ್ನು ನೋಡುತ್ತಲೇ ಆ ಮಂಗಳ ಮುಖಿ ಅಲ್ಲಿಂದಲೇ ಓಡಿಯಾಗಿತ್ತು.

"ಹೇಯ್ ಹೇಯ್ ನಿಲ್ಲು.." ಎಂದು ಕಾರಿಂದ ಕಿರುಚುತ್ತ ಕಾರ್ ಬಾಗಿಲು ತೆರೆಯಲೆತ್ನಿಸಿದಾಗ.. ಹಿಂದಿನ ವಾಹನಗಳ ಹಾರನ್  ಗಳು ಜಾಗ ಬಿಡುವಂತೆ ಬಾರಿಸಿದವು.
"ಹರೀಶ್, ಹಣ ಕೊಟ್ಟು ಬಿಡಬೇಕಿತ್ತು, ಪಾಪ ಅವರಿಗೆ ಇದೆ ಜೀವನ. ಎಲ್ಲೂ ಕೆಲಸ ಕೊಡೋಲ್ಲ, ಪಬ್ಲಿಕ್ ಟಾಯಿಲೆಟ್ ನಲ್ಲೂ, ಬಸ್ ನಲ್ಲೂ ಜಾಗ ಇಲ್ಲ ಅವರಿಗೆ." ಎಂದು ಪಶ್ಚಾತ್ತಾಪದ ನುಡಿ ನುಡಿದಳು ರಾಧಿಕ.
ಆ ಕ್ಷಣದ ಘಟನೆ ಯಿಂದ ಹೊರಬರದ ಹರೀಶ್ ಹೇಗೋ ಸಾವರಿಸಿಕೊಂಡು ಮನೆಗೆಯವರೆಗೂ ಬಂದ . 
"ಊಟ ಬೇಡ ನನಗೆ ರೆಸ್ಟ್ ಬೇಕು ರಾಧಿಕ. leave me alone" ಎಂದು ಹೇಳಿ ಹರೀಶ್ ತನ್ನ ಆಫೀಸ್ ಕೋಣೆಗೆ ಹೋಗಿ ಸೇರಿಕೊಂಡ.
ತನ್ನ ಹಾಸಿಗೆ ಮೇಲೆ ಮಲಗಿ ತನ್ನ ಮತ್ತು ದೀಪಕ್ ನ ಭೇಟಿ ನೆನಪುಗಳ ಮೆಲುಕು ಹಾಕಿದ. 

"ಹೌದು.. ಅದು ಅವನ ಕೈ. ಇಂದು ನನ್ನ ಬಳಿ ಕೈ ಚಾಚಿದ ಮಂಗಳ ಮುಖಿಯ ಕೈ ದೀಪಕ್ ನದ್ದೇ.
ದೀಪಕ್ ಎಂಥ ಕೆಲಸ ಮಾಡಿಕೊಂಡೆ."

ಅಂದು ಬೆಂಗಳೂರಿಗೆ ಬರುವ ಹಿಂದಿನ ದಿನ ಬಹುವಾಗಿ ಮಾತಾಡಬೇಕು ಎಂದು ಕರೆಸಿದ್ದ.

"ಮತ್ತೆ ಸಿಗೋಲ್ವ ಹರೀಶ್?"
"ನೋಡುವ ಸಾಧ್ಯ ಆದ್ರೆ " ಎಂದ.
"ನೀನು ಸಿಕ್ಕಿಲ್ಲ ಅಂತ ಈಗೇನು ಬೇಸರ ಇಲ್ಲ. ಹಾಗಂತ ನಾನೇನು ಸಾಯೊಲ್ಲ. ನಿನಗಂತ ಒಂದು ಗಿಫ್ಟ್ ತಂದಿದ್ದೀನಿ"
"ನನಗೇನು ಬೇಡ ದೀಪಕ್. ನೀನು ಒಳ್ಳೆ ಮನುಷ್ಯನಾಗಿ ಬಾಳೋದು ನನಗೆ ಬೇಕು ಅದೇ ಗಿಫ್ಟ್. ಓಕೆ. ನಾಳೆ ಬೆಳಿಗ್ಗೆ ಹೊರಡುತ್ತಾ ಇದ್ದೀನಿ" ಎಂದ.
ಅವನು ತನ್ನ ಬಲಗೈ ತೋರಿಸುತ್ತ " ಹರೀಶ್" ಎಂದು ಸುಂದರವಾಗಿ ಹಚ್ಚೆ ಹಾಕಿಸಿಕೊಂಡಿದ್ದ.
"ಇದು ನಿನ್ನ ಹುಚ್ಚು"
"ನನ್ನ ನೈಜ ಪ್ರೀತಿ ಸಾಯೋವರೆಗೂ ಇರುತ್ತೆ"
 "ಸರಿ ನಾನು ಬರಲೇ. ಇನ್ನು ಪ್ಯಾಕ್ ಮಾಡಿಲ್ಲ" ಎಂದು ಆತುರವಾಗಿ ಅಲ್ಲಿಂದ ಹೊರಟ ಹರೀಶ್.

"ಹೌದು..  ಅದೇ ಕೈ .. ಅವನೆ  ದೀಪಕ್. ನನ್ನ ಪ್ರೀತಿ ಸ್ನೇಹ ಸಿಕ್ಕಿಲ್ಲ  ಅಂತ ಹೀಗೆ ಆದೆಯಾ? ಏಕೆ  ಹೀಗೆ ಮಾಡಿದೆ  ದೀಪಕ್ ? ತಪ್ಪಾಯ್ತು ದೀಪು. ನಿನ್ನ ಭಾವನೆಗಳಿಗೆ ಸ್ಪಂದಿಸಲಿಲ್ಲ. ತಪ್ಪು ಮಾಡಿಬಿಟ್ಟೆ. ನಿನ್ನ ಒಂಟಿಯಾಗಿ ಬಿಡಬಾರದಿತ್ತು. "
                                   ------------------------------------------------------------










ಕುರುಡು ಪ್ರೀತಿಯಿಂದ..

ಕುರುಡು ಪ್ರೀತಿಯಿಂದ..   ಹೇಗೆ ಬರೆಯಲಿ ಈ ವಿಷಯವನ್ನು ಅಂತ ಅನಿಸುತ್ತಲೇ ಯಾಕೋ ನನ್ನ ಮೇಲೆ ನನಗೆ ಬೇಸರವಾಗುತ್ತಿದೆ. ಅದು ನಾನು ಮಾಡಿದ ತಪ್ಪೋ, ಅವನು ಮಾಡಿದ ತಪ್ಪೋ ಅಥವಾ...