Sunday, July 31, 2011

ಮನಸಲ್ಲಿ ಚೂರು ಜಾಗ ಬೇಕಿದೆ



ಮಾನವ ಅಂದಮೇಲೆ ಒಂದು ಗಂಡು-ಹೆಣ್ಣು ಪರಸ್ಪರ ಆಕರ್ಷಣೆ, ಪ್ರೀತಿ, ಬಾಂಧವ್ಯ ಎಲ್ಲವೂ ಸಹಜ. ಪ್ರಕೃತಿಯ ನಿಯಮದಂತೆ ಆ ಇಬ್ಬರ ಮಿಲನದಿಂದ ಸಂತಾನ ಅಭಿವೃದ್ಧಿ ಮಾನವನ ವಂಶಾವಳಿ ಪೀಳಿಗೆಯ ಉದ್ದಾರ.
ಆದರೆ ಇಲ್ಲಿ ಪುರುಷ-ಪುರುಷ ಮಿಲನ ಸಹಜವೇ ಇಲ್ಲ ಅಸಹಜವೇ ಎನ್ನುವ ತೀವ್ರ ಗೊಂದಲ ಕಾಡುತ್ತಿವೆ.  ಸಹಜ ಕ್ರಿಯೆಯಂತೆ ಸಿಗದ ಈ ಪುರುಷ-ಪುರುಷ ಪ್ರೀತಿ (ಆಕರ್ಷಣೆ) ಸಿಕ್ಕಾಗ ಏನೋ ಸಂತೋಷ  ಮನಸ್ಸಿನ, ದೇಹದ ಮಿಲನ ಬಯಸಿ ಸುಖವನ್ನ ಅರಸಲು ತಡಕಾಡುತ್ತದೆ ಈ ಮನ. ಆದರೆ ಅದೇ ನಿಜವಾದ ಪ್ರೀತಿ ಸಿಗದೇ ಇದ್ದಾಗ ಅಲ್ಲಿರುವ ಆತಂಕ ದುಗುಡಕ್ಕೆ ಯಾವುದೇ ಗಂಡು-ಹೆಣ್ಣಿನ ವಿರಹ ಪ್ರೇಮಕ್ಕಿಂತ ಕಡಿಮೆ ಏನಿಲ್ಲ. ಇಲ್ಲೂ ಪ್ರೀತಿ ಪ್ರೇಮ ಸ್ನೇಹ ಆಕರ್ಷಣೆ ಎಲ್ಲವು ಇದೆ ಆದರೆ ಒಂದು ಜವಾಬ್ದಾರಿಯುತ ಸಂಬಂಧಗಳಿಲ್ಲ. "ಇಂದು ನೀ ನನ್ನವ ನಾಳೆ ನೀ ಯಾರೋ ..." ಎನ್ನುವ ಸ್ಥಿತಿಯಲ್ಲಿದ್ದೇವೆ. ಹೊಸತನ್ನು ಹುಡುಕುವ ಭರದಲ್ಲಿ ತಮ್ಮತನವನ್ನ ಕಳೆದುಕೊಳ್ಳುತ್ತಾ ಮುಂದಿನ ಜೀವನದ ಬಗ್ಗೆ ಚಿಂತಿಸದೆ, ಈಗಿನ ತಕ್ಷಣದ ಮಾನಸಿಕ, ದೈಹಿಕ ಆಸೆಗಳನ್ನ ಪೂರೈಸಿಕೊಳ್ಳುವುದರಲ್ಲಿ ನಿರತ..
ಆದರೆ ವಯಸ್ಸು ಆಕರ್ಷಣೆ ಎಲ್ಲವೂ ಕಡಿಮೆ ಆಗುತ್ತಾ ಬರುವಾಗ ಒಂಟಿತನ ಕಾಡದೆ ಇರುವುದಿಲ್ಲ. ಏನೇ ಇರಲಿ ಮಾನವ ಸಮಾಜ ಜೀವಿ ಜತೆಗಾರ ಬೇಕು ಉತ್ತಮ ಸಂಗಾತಿ , ಬಾಳ ಸಂಗಾತಿ ಬೇಕು.. ಸಿಗುವನೇ ಆ ಸಂಗಾತಿ ಎನ್ನುವ ಜೀವಿ? 
ಕಾಣದಾ ಕಡಲಿಗೆ ಹಂಬಲಿಸಿದೆ ಮನ.. 
ಕಾಣಬಲ್ಲೆನೆ ಒಂದು ದಿನ ?
ಸೇರಬಲ್ಲೆನೆ ಒಂದು ಕ್ಷಣ ?
ಕಾಣದ ಕಡಲು, ಮುಗಿಲ ಮಲ್ಲಿಗೆ, ನಿಲುಕದ ನಕ್ಷತ್ರ, ಮೃಗತೃಷ್ಣ, ಮರೀಚಿಕೆ , ಕಾಮನಬಿಲ್ಲು, ಆಕಾಶ ದೀಪ, ಬಿಸಿಲುಗುದುರೆ 
ಎಲ್ಲವು ನೀನಾಗಬೇಡ ಗೆಳೆಯ. ನನ್ನಂತೆ ನಿನಗೂ ಒಂದು ಮನಸಿದೆ..
"ಆ ಮನಸಲ್ಲಿ ಚೂರು ಜಾಗ ಬೇಕಿದೆ"
 

Wednesday, June 15, 2011

ಎಲ್ಲಿಂದಲೋ ಬಂದವರು....



ಹೌದು ಇವರು ಎಲ್ಲಿಂದಲೋ ಬಂದವರು..
ಬಂದವರೇ ಮನಸನ್ನ ಆಕ್ರಮಿಸಿ ಬಿಡ್ತಾರೆ. ಅವರ ಮಾತು ಮಾತಿನ ಮೋಡಿ.. ನಗು ನಗುವಿನ ಅಂದ ಚೆಂದ ಮನಸೂರೆ ಮಾಡುತ್ತೆ.
ಹೀಗೆ ಬಂದವ ಸನುಶ್. ಬಂದವನೇ ಮನ ಕದ್ದು ಮಂಚದಲ್ಲಿ ಆಟವಾಡಿ ಸಣ್ಣ ವಿಷಯಕ್ಕೆ ಕೋಪ ಮಾಡಿಕೊಂಡು ಹೋದ. ಆದರು ಅವನ ಮಾತಿಗೆ.. ಮನಸಿಗೆ ಸೋತಿದ್ದ ನಾನು ಕಾಂಟಾಕ್ಟ್ ನಲ್ಲಿದ್ದೆ. ಮತ್ತೊಮ್ಮೆ ಹೀಗೆ ಚಾಟ್ ನಲ್ಲಿ ಸಿಕ್ಕಿದಾಗ...
 'I am in deep trouble. Please help me, argued with my parents and came from native to here. since yesterday i didn't have food yaar. If you give me some amount i will give back sure' ಎಂದ ನನ್ನ ಮನಸು ಕರಗಿತು. ಊಟ ಮಾಡಿಲ್ಲ ಎಂದು ಸರಿ "ಸಂಜೆ ಸಿಗು" ಎಂದೆ.
ಆ ಸಂಜೆ ಸಿಕ್ಕಿದ. ಅವನ ಮೊಗದಲ್ಲಿ ಹಿಂದಿನ ಕಳೆ, ಆಕರ್ಷಣೆ ಎಲ್ಲವೂ ಕಳೆದು ಹೋಗಿತ್ತು. ಅವನ ಧೈರ್ಯ ಸ್ಥೈರ್ಯ ಎಲ್ಲವು ಉಡುಗಿತ್ತೇನೋ. ಅವನಿಗೆ ಏನೋ ಕೇಳುವ ಆತುರ ಮನದಲ್ಲಿ ಏನೋ ಸಂಕೋಚ ಇತ್ತು. ಆದರು ಧೈರ್ಯ ಮಾಡಿ ಕೇಳಿದ 
"ನಾಳೆ ಮೈಸೂರು ನಲ್ಲಿ interview ಇದೆ. ಹೋಗೋದಿಕ್ಕೆ ಊಟಕ್ಕೆ ದುಡ್ಡಿಲ್ಲ, ಇದ್ದರೆ ಕೊಡು ಅಲ್ಲಿ ಕೆಲಸ ಸಿಕ್ಕ ಮೇಲೆ ಕೊಡ್ತೀನಿ" ಅಂದ. ಆಯ್ತು ಅಂತ ಅವನಿಗೆ ಹಣ ಕೊಟ್ಟೆ. ತೆಗೆದುಕೊಂಡು ಇಲ್ಲಿವರೆಗೆ ಎರಡು ವರ್ಷ ಆಗುತ್ತಾ ಬಂದಿತು. ಒಂದು ಕೃತಜ್ಞತೆಗಾಗಿ ಒಂದು ಸಂದೇಶ  ಇಲ್ಲ. ನನಗೆ ಆ ಹಣ ಏನು ಬೇಕಿಲ್ಲ ಒಂದೇ ಒಂದು ಸಂದೇಶ ಸಾಕಿತ್ತು ನನಗೆ. ಮನಸ್ಸು ಆ ನೋವನ್ನ ತಡೆಯಲು ಒಪ್ಪುತ್ತಿಲ್ಲ.
ಇದೆ ರೀತಿ suhassree ಹಾಗೆ ಮಾಡಿದ. ಕೊಡುವುದಕ್ಕೆ ಆಗುವುದಿಲ್ಲ ಅಂತ ಹೇಳಿದರೆ ಆಗಿತ್ತು. ಚಾಟ್ ನಲ್ಲಿ ನಿಮ್ಮನ್ನ  block ಮಾಡಿ, ಬೇರೊಂದು ಹೆಸರಲ್ಲಿ ಶುರು ಮಾಡಿಕೊಂಡು, ಇನ್ನಿತರರ ವಂಚಿಸುತ್ತಿದ್ದಾರೆ.
ಕಷ್ಟದಲ್ಲಿ ಆದ ಗೆಳೆಯನನ್ನು ದುರುಪಯೋಗ ಪಡಿಸಿಕೊಂಡು ತಮ್ಮ "ಕೆಲಸವನ್ನ" ನಯವಾಗಿ ಮುಗಿಸಿಕೊಂಡು ಹೋಗುವ "ನಯವಂಚಕರ" ಬಗ್ಗೆ ಗೆಳೆಯರೇ ಹುಷಾರಾಗಿರಿ. ಯಾವುದೇ ವಿಷಯದಲ್ಲೂ ನಿಮ್ಮ ಖಾಸಗಿ ವಿಷಯಗಳನ್ನ ದಯವಿಟ್ಟು ಬಹುವಾಗಿ ಹಂಚಿಕೊಳ್ಳಬೇಡಿ.

ಹಾ !! ಇಲ್ಲೊಂದು ಉಪಸಂಹಾರ ಬೇಕು ಅನಿಸುತ್ತಿದೆ.
ನನಗೆ ಕೇಳಿಪಟ್ಟ ಹಾಗೆ ಕೆಲ ನಯವಂಚಕರು, ಗೆಳೆಯರೊಂದಿಗೆ ದೈಹಿಕ ಸಂಪರ್ಕ ಹೊಂದಿ ಅಲ್ಲಿಂದ ಹೊರಡುವಾಗ ಅವರ ರೂಂ ನಲ್ಲಿರುವ ಮೊಬೈಲ್, ವಾಚ್, ಲ್ಯಾಪ್ ಟಾಪ್, ಹಣ ಹಾಗು ಇನ್ನಿತರ ಬೆಲೆಬಾಳುವ ವಸ್ತುಗಳನ್ನ ಕದ್ದು ಓಡಿದಂತ ಸುದ್ದಿ.
ಅಂತವರ ಬಗ್ಗೆ ಪೋಲಿಸ್ ಕಂಪ್ಲೈಂಟ್ ಕೊಡಲಾರದ ಸ್ಥಿತಿ.
ಹಾಗಾಗಿ ಅಂತವರ ಬಗ್ಗೆ ಹುಷಾರಾಗಿರಿ. ಎಷ್ಟೇ ಎಚ್ಚರವಿದ್ದರೂ ಅಂತವರು ಇದ್ದೆ ಇರುತ್ತಾರೆ. ಇಲ್ಲೂ ಮೋಸ , ದಗಾ ನಡೆಯುತ್ತಿದೆ. ಒಂದು ಒಳ್ಳೆಯ ಉತ್ತಮ ಸಂಪರ್ಕ ಏರ್ಪಡುತ್ತಿಲ್ಲ

ಮೋಸ ಮಾಡುವ ನಯವಂಚಕರೆ,
ನಿಮಗೂ ಹೃದಯ, ಮನಸ್ಸು ಇರಲಿ, ಇಲ್ಲಿ ಹಾಸಿಗೆ ಮೇಲೆ ನಡೆಯುವುದು ಒಂದು ಯಾಂತ್ರಿಕ ಕ್ರಿಯೆಯಲ್ಲ. ಅಸಹಜತೆಯಿಂದ ಸಹಜತೆಯಂತೆ ನಡೆಯುವ ಒಂದು ಕಾರ್ಯ. ಹಣ ಕೀಳುವ, ಕದ್ದೊಯ್ಯುವ ಚಾಳಿ ಬಿಡಿ. ಆ ಹಣ, ವಸ್ತು ಎಷ್ಟು ದಿನ ನಿಮ್ಮಲ್ಲಿ ಉಳಿಯುತ್ತೆ. ಆ ವಸ್ತು ನೋಡಿದಾಗೆಲ್ಲ ನಿಮ್ಮ ಮನಸಲ್ಲೂ "ಹೌದು, ನಾನು ಇದನ್ನ ಕದ್ದೆ". ಅಂತ ಅನಿಸೋಲ್ವೆ.
ಯಾರಿಂದಾದರೂ ಹಣ ತೆಗೆದು ಕೊಂಡಿದ್ದರೆ ಸಾಧ್ಯವಾದಷ್ಟು ಹಿಂತಿರುಗಿಸಿ ಕೊಡಲು ಪ್ರಯತ್ನಿಸಿ. ಇಲ್ಲವಾದಲ್ಲಿ "ಆಗುತ್ತಿಲ್ಲ, ಕ್ಷಮಿಸಿ " ಅಂತಾದರೂ ಹೇಳಿ. ಇನ್ನೊಬ್ಬರ ಸುಲಿಗೆ, ಬ್ಲ್ಯಾಕ್ ಮೇಲ್ ಖಂಡಿತ ಮಾಡಬೇಡಿ. 
ಇನ್ನೊಬ್ಬರ ಜೀವನದಲ್ಲಿ ಆಟವಾಡಬೇಡಿ. ಹಾಗೆ ಆದಲ್ಲಿ ನಿಮಗೂ ಬೀದಿ ಬದಿಯ ಸೂಳೆಗೂ ವ್ಯತ್ಯಾಸವೆಲ್ಲಿ. ?

Sunday, October 10, 2010

ಮದುವೆಗೆ ಮುನ್ನ.. ಮದುವೆಯ ನಂತರ..



ಕೇಳಿದರೆ ಸಾಕು ಇನ್ನಿಲ್ಲದಷ್ಟು ಕೋಪ .. 'ಅರಿ..' ಗೆ. 'ಆಗಿದೆಯೋ ಇಲ್ಲವೋ ನಿನಗ್ಯಾಕೆ? ನಿನ್ನ ಜೊತೆ ಸೆಕ್ಸ್ ಮಾಡ್ಬೇಕು ಅಂತ ಅನಿಸ್ತ ಇದೆ' ಅಂದ. ಇಷ್ಟು ದಿನ ನೀನೆ ನನ್ನ ಜೀವದ ಗೆಳೆಯ ಹಾಗೆ ನಿನ್ನ ಬಿಟ್ಟು ಇರೋಕೆ ಆಗೋಲ್ಲ. ಸಿಗೋಣ ಮೀಟ್ ಮಾಡೋಣ ಅನ್ನುತ್ತಿದ್ದ 'ಅರಿಹಂತ' ಒಮ್ಮೆ mall ನಲ್ಲಿ ತನ್ನ ಹೆಂಡತಿಯೊಂದಿಗೆ ಸಿಕ್ಕಿಬಿದ್ದ. 
sms ಮಾಡಿದೆ. ನೀ ಹೇಗೆ ಮಾಡಿದ್ದು ಸರಿನಾ? ಅಂತ. ಅದಕ್ಕೆ ಮೇಲಿನ ಉತ್ತರ ಸಿಕ್ಕಿತು. ಮೊದಲೇ ಕೇಳಿದ್ದೆ. ಹೇಳಿದ್ದೆ ಕೂಡ.. ಮದುವೆ ಆದವರು ಎರಡೂ ಕಡೆ ಸುಖ ನೋಡ್ತಾರೆ. ಹೆಂಡತಿ ಇಲ್ಲದೆ ಇರುವ ಸಮಯದಲ್ಲಿ ಸಿಗುವ Gay bakra ಗಳನ್ನ ಮತ್ತಷ್ಟು ಬಕ್ರ ಮಾಡಿ ಮಜಾ ತೆಗೆದುಕೊಳ್ತಾರೆ. ಕೆಲವರು ಸೀರಿಯಸ್ ಆಗಿ ಕೇಳಿದರೆ ' ನಂಗೆ ಫ್ಯಾಮಿಲಿ ಮುಖ್ಯ. ಅದಕ್ಕೆ ನೀನು adjust ಮಾಡ್ಕೊಬೇಕು' ಅಂತ . 
ಅದನ್ನೇ ಕೇಳಿದೆ ' ಅರೀ.. ನಿನಗೆ ನಿನ್ನ ಹೆಂಡತಿ ಇದ್ದಾಳೆ .. ನಾನಿದ್ದೀನಿ. ಆದ್ರೆ ನನಗೆ ನೀನಿರುವುದು ಒಬ್ಬನೇ. ಬೇರೆ option ಇಲ್ಲ ಕಣೋ' ಎಂದೆ. ಅದಕ್ಕವನು 'ಅದು ಗೊತ್ತು ಆದ್ರೆ ನಾನೇನು ಮಾಡೋಕೆ ಆಗೋಲ್ಲ' ಎನ್ನುತ್ತಾ  ಅಂದು ಕೈ ಆಡಿಸಿ ಹೋದವ ಮತ್ತೆಂದು ಬರಲಿಲ್ಲ.

ಸು, ಶ್ರೀ , ಪ್ರ.. ಎಲ್ಲ ಒಬ್ಬನೇ. ತ್ರಿಮೂರ್ತಿ ಅವತಾರ. ಒಳ್ಳೆಯ ಸ್ನೇಹಿತ ಒಳ್ಳೆಯ  ಗುಣಕ್ಕೆ  ಸೋತ ನಾನೂ ಸಹ ಅವನ ಗೆಳೆತನಕ್ಕೆ ಹಾತೊರೆದೆ. ಗೆಳೆತನ .. ಪ್ರೀತಿಯ ಹಂತ(?) ಸೇರುತ್ತಿತ್ತು.. ಅವನದು ಮೊದಲೇ ಷರತ್ತು. ಸಂಜೆ  6  ಗಂಟೆ ಮೇಲೆ sms / call ಮಾಡಬಾರದು ಅಂತ. ಆಯ್ತು ಅಂದು ಮಾತನಾಡುತ್ತ ಅವನೊಂದು ಸಂಜೆ ಆನ್ಲೈನ್ ಚಾಟ್ ಮಾಡುವ ಅಂದ. ಚಾಟ್ ಮಾಡುತ್ತ  ಅದು ಅವನ official orkut ಅವಕಾಶ ಬಂತು ಅವನಿಗೆ ತಿಳಿಯದೆ.  ನೋಡಿದರೆ ಅವನಿಗೆ ಮದುವೆ ಆಗಿ ಒಂದು ಪಾಪು ಮನೆಗೆ ಬರುವ ಹಂತದಲ್ಲಿದೆ. ಆತನ ಪತ್ನಿ ಹೆರಿಗೆಗೆ ತವರಿಗೆ ಹೋಗಿರುವುದರಿಂದ ಇವನಿಗೇನೋ ತೆವಲು. ಕೇಳಿದರೆ ಕಾಲೇಜ್ ನಲ್ಲಿ ಆಗಿತ್ತು ಅದನ್ನ ಮದುವೆ ಆದ ಮೇಲು ಹೀಗೆ ಮುಂದುವರೆಸಿದ್ದೇನೆ. ತಪ್ಪಾ ? ಎಂದ. ಇದಕ್ಕೇನು ಉತ್ತರ ಹೇಳಲಾಗದೆ ನಾನು ಸುಮ್ಮನಾದೆ. ಅಲ್ಲಿಗೆ ಅವನ ತಪ್ಪು ಅರಿವಾಗಿತ್ತೇನೋ .. ಅವನ chapter ಅಲ್ಲಿಗೆ ಕ್ಲೋಸ್.

Sunday, July 4, 2010

ಈ ಸಂಜೆ ಯಾಕಾಗಿದೆ...?


" ಈ ಸಂಜೆ ಯಾಕಾಗಿದೆ......?" FM ನಲ್ಲಿ ಕೇಳಿಬರುವಾಗ ನಾನು ಅವನ ರೂಂನಿಂದ ಬಂದು ಸಾಕಷ್ಟು ಸಮಯವಾಗಿತ್ತು. ಕಾಫಿ ಕುಡಿವ ಸಲುವಾಗಿ ಅಲ್ಲೇ ಇದ್ದ ಕಾಫಿ ಬಾರ್ ಗೆ ಹೋಗಿ ನಿಂತು ಸಿಗರೆಟ್ ಗೆ ಕೈ ಹಚ್ಚಿದಾಗ ಪಕ್ಕದಲ್ಲಿ ಚಪ್ಪಾಳೆ ಸದ್ದು.
"ಕೊಡು, ದಿನಾ ಹೀಗೆ ಮಾಡ್ತಿಯಾ, ಇಲ್ಲಿ ನೋಡು ಬರ್ತಿಯಾ " ಎಂದು ಗಂಡು ಧ್ವನಿಯ ಹೆಣ್ಣು ಮುಖದವ ಕೇಳಿದಾಗ.. ಎಲ್ಲೋ ಒಂದು ಸುಳಿಮಿಂಚು ಮನದಾಳದೊಳಗೆ ಇಳಿಯಿತು. ಮೈಯೆಲ್ಲಾ ಕರೆಂಟ್ ಹೊಡೆದ ಹಾಗೆ..ನಾಚಿಕೆ, ಸಂಕೋಚ, ಅಳುಕು ಅಲ್ಲ ಒಮ್ಮೆಗೆ.... ಅಲ್ಲಿಂದ ಕಾಲ್ತೆಗೆದು BEL ಸರ್ಕಲ್ ಬರುವ ಹೊತ್ತಿಗೆ ಅಲ್ಲೆಲ್ಲೇ ನಿಂತಿದ್ದ 'ಮಂಗಳ ಮುಖಿಗಳು' ಹಣಕ್ಕಾಗಿ ಅವರಿವರನ್ನು ಕಾಡಿಸುತ್ತಿದ್ದರು.
ಇನ್ನು ತುಂಬಾ ಕ್ರಮಿಸಬೇಕಾಗಿದೆ. ದೇಹವೂ ಸ್ವಲ್ಪ ಆಯಾಸ ವಾದಂತೆ ಇತ್ತು. ಅಲ್ಲೇ ನೆನಪಾಯ್ತು BEL ಪಾರ್ಕನಲ್ಲಿ ಕುಳಿತು ಮುಂದೆ continue ಮಾಡೋಣ ಅಂತ. ಸುತ್ತ ಹಸಿರು ಗಿಡ ಪ್ರಶಾಂತ ಅಲ್ಲೊಮ್ಮೆ ಇಲ್ಲೊಮ್ಮೆ ಮಕ್ಕಳಾಟ, ಗೆಳೆಯರ ಗುಂಪು..

'ಇಲ್ಲೇ ಅಲ್ಲವೇ ಅವನನ್ನ meet ಮಾಡಿದ್ದು. ಎಷ್ಟೊಂದು ಸಲ chatting, sms, mails.. ಹಾ ಅವನೇ ನನ್ನ ಮೊದಲ GAY friend. ಎಷ್ಟು ವರ್ಷ ಆಗಿರಬೇಕು ಸುಮಾರು 4 ವರ್ಷ ಆಗಿರಬೇಕಲ್ಲ.. ಹೆಸರೇನು .... ಕಿಶೋರ್ ... ಕಿರಣ್.. ಶೌವಿಕ್ .. ನೆನಪೇ ಬಾರದು. ಹೌದು.. ರಘು . ಚೆಂದ ಇದ್ದ.. ಏನೇನೋ ಕೇಳಿದ ಆಗ ನಂಗೆ ಏನು ಅರ್ಥ ಆಗಿರಲಿಲ್ಲ. ನನ್ನ ಬುದ್ದು ಅಂದ. ಹೌದು ಬುದ್ಧನಾಗದ ಬುದ್ದು ನೆ ನಾನು. ಆಗ ಅವನೆಂದ 'ನಿನ್ನಲ್ಲಿ ನನಗೆ ಇಷ್ಟ ಇಲ್ಲ. ಮೊದಲು ಇದನ್ನೆಲ್ಲಾ ತಿಳ್ಕೋ. ಆಮೇಲೆ ನಿನಗೇ suit ಆಗುವವನು ಸಿಕ್ತಾನೆ' ಅಂತ ಹೇಳಿ ಹೋದ. ನೋಡುತ್ತಲೇ ಇದ್ದೆ ಅವನನ್ನ ನನಗೂ ಆಗ ಏನು ಅರ್ಥ ಆಗಿರಲಿಲ್ಲ ..
ಟೈಮ್ ಆಯ್ತು ರೂಂ ಕಡೆ ಹೋಗುವ ಎಂದು ಗಾಡಿ ಹತ್ತಿದೆ. ಮನದಲ್ಲಿ ಏನೋ ತಳಮಳ ... 'ಎಲ್ಲಿಗೆ ಪಯಣ... ಯಾವುದೊ ದಾರಿ..ಏಕಾಂಗಿ ಸಂಚಾರಿ..' ಎಂಬ ಹಾಡು ನೆನಪಾಯ್ತು.
ರೂಂ ನಲ್ಲಿ ಭರತ್. ರಂಜನ್, ರಾಜು, ಎಲ್ಲ TV ನೋಡ್ತಾ ಇದ್ದರು ನಾನು ಸುಮ್ಮನೆ ಹೋಗಿ ನನ್ನ ಜಾಗದಲ್ಲಿ ಬಿದ್ದುಕೊಂಡೆ. ಊಟ ಆಯ್ತು.. SMS ಆಗಲೇ ಬಂದಿತ್ತು.
ಮತ್ತದೆ ನೆನಪು.. ಅಂದು ರಘು ಕಳಿಸಿದ sms .. ನೀನು 'www.g.......com' ನಲ್ಲಿ log in ಆಗು ಸಿಕ್ತಾರೆ ನಿನಗೆ ಬೇಕಾದವರು... ಅಂತ.
ಕುತೂಹಲ ತಡೆಯಲಾರದೆ ಬೆಳಿಗ್ಗೆ ಎದ್ದು ಅವನು ಹೇಳಿದ ಸೈಟ್ ನಲ್ಲಿ register ಆದೆ. ಕೆಲ ದಿನಗಳ ನಂತರ ಒಂದೆರಡು ಮೆಸೇಜ್ ಗಳು ಬಂದವು. ಅದರಲ್ಲಿ 'ಕೃಷ್ಣ' ಅನ್ನುವನ profile ಮತ್ತು message ತುಂಬಾ ಹಿಡಿಸಿತು. ಮತ್ತದೆ sms, chat, 'ಸ್ವಲ್ಪ ನೀನು ಚೇಂಜ್ ಆಗ್ಬೇಕು ಅಂದ' ಆದೆ ಅವನಿಗೋಸ್ಕರ ಹಲವು ಬದಲಾವಣೆ, ಮಾತಾಡುವ ಶೈಲಿ ಎಲ್ಲ ಕಲಿಸಿ ಕೊಟ್ಟ. ಬರುತ್ತಾ ಬರುತ್ತಾ ಅವನಿಗೆ ನನ್ನ ಮೇಲೆ ಆಸಕ್ತಿ ಕಳೆದು ಕೊಳ್ಳ ತೊಡಗಿತೇನೋ ಅನಿಸ್ತು. ಭೇಟಿಯಾಗಲು ಕೇಳಿದೆ ಪ್ರತಿ ಭಾರಿ ಏನಾದರೊಂದು ಕಾರಣ ಹೇಳಿ ತಪ್ಪಿಸುತಿದ್ದ. ಅವನು ನನ್ನ ಜೀವನವನ್ನೇ ಬದಲು ಮಾಡಿದವ, ಅವನಿಗೆ ನನ್ನ ಜೀವನ ಕೊಡ್ಬೇಕು ಅಂತ ನಿರ್ಧರಿಸಿದ್ದೆ.. ಯಾಕೆ ಹೀಗೆ ಮಾಡ್ತಾ ಇದ್ದಾನೆ ಕೇಳುವ ಅಂತ ಅವನ birthday ನೆಪವೊಡ್ಡಿ ಅವನಿಗಿಷ್ಟದ ಶರ್ಟ್ gift ಕೊಟ್ಟ ದಿನವೂ ನನ್ನಿಂದ ದೂರ ಆದ. ಎಲ್ಲದಕ್ಕಿಂತ ಅವನ್ನ ತುಂಬಾ ಪ್ರೀತಿಸಿದ್ದೆ. ಇಷ್ಟ ಪಟ್ಟಿದ್ದೆ. ಸುಮಾರು ದಿನಗಳ ನಂತರ ತಿಳಿಯಿತು ಅವನು ನನ್ನ ಮನಸಲ್ಲ ನನ್ನ ದೇಹವನ್ನ ಇಷ್ಟ ಪಟ್ಟಿಲ್ಲ ಅಂತ... ನಿಧಾನ ಚೇತರಿಕೆ.
ಆಸೆಗಳ ಅರಸುವ ಆಸೆ . ಬಯಕೆಗಳ  ಪೂರೈಸುವಾಸೆ 
ನಂತರ .. ಆ ಪ್ರೊಫೈಲ್ ನ delete ಮಾಡಿ ಹೊಸದೊಂದು create ಮಾಡಿದೆ.
ಅಲ್ಲಿಂದ ಹಲವು ಬಗೆಯ ವಿಷಯಗಳು ತಿಳಿದವು. ಎಲ್ಲವೂ ಪ್ರೀತಿಯ ಸ್ನೇಹದ ಹೆಸರಲ್ಲಿ SEX ತನ್ನ ಪಾಡಿಗೆ ತಾನು ಹಗಲು ಇರುಳೆನ್ನದೆ ಬ್ರಾಹ್ಮಣ - ಶೂದ್ರ ನನ್ನದೇ ಹಿಂದೂ - ಮುಸ್ಲಿಂ - ಕ್ರಿಸ್ತಿಯನ್ ಅನ್ನದೆ ಸ್ವಚಂದವಾಗಿ ತನ್ನ ಪಾಡಿಗೆ ತಾನು ವಿಹರಿಸುತಿತ್ತು.
ಆಗೊಂದು ಮುಗಿಲ್ಲಲ್ಲೊಂದು ಮಿಂಚು. ಒಮ್ಮೆ ಅವನನ್ನ ಭೇಟಿ ಮಾಡುವ ಅಂತ. ಅವನಾರೋ ನಾ ತಿಳಿಯೆನು. ಆದರು ಭೇಟಿಯಾಗುವ ಅಂತ ಅಂದು ಅವನ ರೂಮಿನ ಕಡೆ ಹೊರಟೆ. ಮಳೆ ... ಸಣ್ಣಗೆ ಜಿಟಿ ಜಿಟಿ ಅನ್ನುತಿತ್ತು. ಅಲ್ಲೇ ಸಿಕ್ಕ. ನೋಡಿದೆವು, ಮಾತಾಡಿದೆವು ... "ಸರಿ ಈಗಲೇ .. ನನ್ನ ಬಯಕೆ ತೀರಿಸು" ಕರೆದ. ನನಗೆ ದೈಹಿಕ / ಮಾನಸಿಕ ಭಾವನೆಗಳು ಇಬ್ಬಂದಿಯಾಗಿ ತೊಳಲಾಡಿದವು. ನಂತರ ಕೇಳಿದೆ.. "ಸೆಕ್ಸ್ ನಂತರ ಮತ್ತೆ ಸಿಕ್ತಿಯಾ ?" ಅಂತ.. ಹ್ಞೂ ಅಂದ.. ದೇಹಗಳು ಒಂದಾದವು.. ಮನಸು ಮಾಡದೇ .. 
ನೆನಪಾಗದೇ ಆ ಕ್ಷಣಗಳು ಆ ದಿನಗಳು..
ನನ್ನ ದೇಹದ ಸವಿಯನ್ನ ಅನುಭವಿಸಿದ್ದ.. ಕಾಮವನ್ನು ಪ್ರೀತಿಯೆಂದು ಕೊಂಡೆ.. ನನ್ನನ್ನ
ನಾನೇ ಅವನಿಗೆ ಸಮರ್ಪಿಸಿಕೊಂಡೆ, ನನ್ನ ದೇಹದ ಇಂಚಿಂಚನ್ನು ಅನುಭವಿಸಿದ ಕಾಮದ ಹಸಿವು ತೀರಿದ ನಂತರ ಬೆನ್ನು ಮಾಡಿದ. ಮತ್ತೆ ಪ್ರೀತಿಗಾಗಿ ಅರಸುತ್ತಾ ಹೊರಟೆ ಆದರೆ ಬೇಕಾಗಿದ್ದು ಸಿಗಲಿಲ್ಲ. ಕನ್ನಡಿ ಮುಂದೆ ಬೆತ್ತಲೆಯಾಗಿ ನಿಂತರೆ ನನ್ನ ಮೇಲೆ ನನಗೆ ಅಸಹ್ಯ ವಾಗುತ್ತೆ ಯಾಕೆಂದರೆ ಅವನ ಕೈಗಳು ಈ ದೇಹದ ಮೇಲೆ ಹರಿದಿವೆ..

ಆಸೆಗಳೆಂದರೆ ಹೀಗೆ..
ಹಕ್ಕಿಯ ಹಾಗೆ..
ಅದುಮಿಟ್ಟರೆ ಕುಟುಕುವುದು...
ತೆರೆದಿಟ್ಟರೆ ಹಾರಿಹೋಗುವುದು...

ಕತ್ತಲ್ಲಲ್ಲೇ ಹುಟ್ಟಿ ಕತ್ತಲ್ಲಲ್ಲೇ ಕರಗಿ ಹೋಗುವಂತದು ಈ Gay Sex...
ಕೆಲವೊಮ್ಮೆ ದೇವರನ್ನ ಶಪಿಸಿ, ಅಪ್ಪ ಅಮ್ಮಂದಿರನ್ನ ಮನಸಲ್ಲೇ ಕೇಳಿ.. 'ಏಕೆ ಹೀಗಾಯ್ತೋ ನಾನು ಕಾಣೆನು ' ಮನಸಲ್ಲೇ ನೊಂದು ನನ್ನ ನಿತ್ಯದ ಹಾದಿ ಹಿಡಿವಾಗ.. ರಸ್ತೆ ಯಲ್ಲಿ ಕಾಣುವ ಬೈಕ್ ಗಳು, ಕಾರ್ ಗಳು..
ಅದರ ಮೇಲಿರುವ ತಮ್ಮ ತಮ್ಮ ಪ್ರಿಯತಮೆಯ .. ಗೆಳತಿಯ ಹೆಸರುಗಳು ಚಿತ್ತಾಕರ್ಷವಾಗಿ , ರಂಗು ರಂಗಾಗಿ ಬರೆಸಿಕೊಂಡು, ಮೆತ್ತಿಸಿಕೊಂಡಿರುವುದನ್ನ ನೋಡಿದರೆ ನನ್ನ ಮನಸಲ್ಲಿ ಏನೋ ಈರ್ಷ್ಯೆ... ವ್ಯಥೆ. ನಾನು ಎಲ್ಲರಂತೆ ಇದ್ದಿದ್ದರೆ.. ನನಗು ಒಬ್ಬಳು ಗೆಳತಿ, ಪ್ರಿಯತಮೆ, ಪತ್ನಿ ಎಲ್ಲ ಸಿಕ್ಕಿ, ಅವರ ಹೆಸರನ್ನ ಹೀಗೆ ಪ್ರೀತಿಯಿಂದ ಕಾರ್ , ಬೈಕ್ ಮೇಲೆ ಬರೆದು . " ಇವಳೇ ನನ್ನವಳು" ಅಂತ ಹೇಳ್ಕೊಬಹುದಿತ್ತಲ್ಲ ಎಂಬ ಆಶೆ ಮನೋವ್ಯಥೆ ಕಾಡುತ್ತೆ.
ನನ್ನ ವಿಧಿಬರೆಹಕ್ಕೆ ಶಪಿಸಿಕೊಂಡರು ಬದಲಾಗದ Gay ಸ್ಥಿತಿ.. ಎಲ್ಲ ಕಡೆ ನನ್ನಂತೆ Gay ಜೀವನ ನಡೆಸುತ್ತಾ ಇದ್ದಾರೆ ಎಂದು ನನಗೆ ನಾನೇ ಸಮಾಧಾನ ಪಟ್ಟು. ನನಗೂ ಒಬ್ಬ ನನಗಿಂತ ನನ್ನನ್ನ ಇಷ್ಟ ಪಡುವ ಗೆಳೆಯ (ಪ್ರಿಯತಮ, Partner, lifemate..) ಸಿಕ್ಕರೆ ನಾನು ಹೀಗೆ ಹೆಸರನ್ನ ಬೈಕ್. ಕಾರ್ ಮೇಲೆ ಕೆತ್ತಿಸಬಹುದಲ್ಲ ಎಂಬ ಹುಚ್ಚು ಕಲ್ಪನೆಯಲ್ಲಿ, ಬೆಂಗಳೂರಿನ ಟ್ರಾಫಿಕ್ ಜಾಮ್ ನಲ್ಲಿ ... ಅವನ ಹುಡುಕಾಟದಲ್ಲಿ ಕಳೆದು ಹೋದೆ.

ಕುರುಡು ಪ್ರೀತಿಯಿಂದ..

ಕುರುಡು ಪ್ರೀತಿಯಿಂದ..   ಹೇಗೆ ಬರೆಯಲಿ ಈ ವಿಷಯವನ್ನು ಅಂತ ಅನಿಸುತ್ತಲೇ ಯಾಕೋ ನನ್ನ ಮೇಲೆ ನನಗೆ ಬೇಸರವಾಗುತ್ತಿದೆ. ಅದು ನಾನು ಮಾಡಿದ ತಪ್ಪೋ, ಅವನು ಮಾಡಿದ ತಪ್ಪೋ ಅಥವಾ...